ನ್ಯೂಸ್

ಸತ್ಯಪ್ಪ ಹೋರಾಟದಿಂದ ರೈತರ ಸಾಲ ಮನ್ನಾ

ಹುಣಸೂರು: ಸತ್ಯ ಎಂಎಎಸ್ ಫೌಂಡೇಷನ್‌ನ ಸತತ ಹೋರಾಟದ ಫಲವಾಗಿ ಸಾಲಮನ್ನಾ ಸೌಲಭ್ಯ ಪಡೆಯುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಭಾಗದ ರೈತರು ಸತ್ಯಪ್ಪ ಅವರಿಗೆ ಆಭಾರಿಯಾಗಿದ್ದಾರೆ ಎಂದು ಗಾವಡಗೆರೆ ರೈತಸೇವಾ ಸಹಕಾರ ಸಂಘ(ಆರ್‌ಎಸ್‌ಎಸ್‌ಎನ್)ನ ಸದಸ್ಯ ವೆಂಕೋಬರಾವ್ ತಿಳಿಸಿದರು.

ಸಂಘದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸತ್ಯಪ್ಪ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಬಜೆಟ್‌ನಲ್ಲಿ ಘೋಷಿಸಿದ್ದ ಸಾಲ ಮನ್ನಾ ಯೋಜನೆಯಡಿ ಗಾವಡಗೆರೆಯ ಆರ್‌ಎಸ್‌ಎಸ್‌ಎನ್‌ನ 884 ರೈತರ ಪೈಕಿ 411 ರೈತರು ಮಾತ್ರ ಯೋಜನೆಯ ಲಾಭ ಪಡೆದಿದ್ದರು. ಉಳಿದ 473 ರೈತರು ಪಡೆದಿರಲಿಲ್ಲ.

ಇದನ್ನು ಗಮನಿಸಿದ್ದ ಸತ್ಯಪ್ಪ, ಸಾಲಮನ್ನಾ ಯೋಜನೆ ಜಾರಿಗಾಗಿ ನಿಯುಕ್ತಿಗೊಂಡಿದ್ದ ಐಎಎಸ್ ಅಧಿಕಾರಿ ಮನೀಶ್ ಮುದ್ಗಲ್ ಅವರನ್ನು ಸಂಪರ್ಕಿಸಿ ಅವರು ಕೋರಿದ ಪೂರಕ ದಾಖಲೆ, ಮಾಹಿತಿ ಮತ್ತು ರೈತರ ಆಧಾರ್ ಕಾರ್ಡ್‌ಗಳನ್ನು ಒದಗಿಸಿ, ರೈತರ ಖಾತೆಗೆ ಹಣ ಜಮಾ ಆಗುವಂತೆ ಮಾಡಿದರು. ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸತ್ಯಪ್ಪ, 150 ರೈತರು ತಮ್ಮ ಸಾಲದ ಮೊತ್ತವನ್ನು ಈಗಾಗಲೇ ಸಂಘಕ್ಕೆ ಪಾವತಿಸಿದ್ದಾರೆ. ಅವರು ಪಾವತಿಸಿದ ಹಣ ವಾಪಸ್ ಸಿಗಲಿದೆ. ಈ ಬಗ್ಗೆ ಆತಂಕ ಬೇಡ ಎಂದರು.

ನಮೋ ಬ್ರಿಗೇಡ್ ಮುಖಂಡ ಪಾಪು ಶಿಂಧೆ ಮಾತನಾಡಿದರು. ರೈತರಾದ ಕಿರಣ್‌ಸಿಂಧೆ, ಶಿವಾಜಿರಾವ್ ಘಾಟ್ಕೆ, ಕೃಷ್ಣೋಜಿರಾವ್ ದೊರೆ, ಉಮೇಶ್ ಸಿಂಧೆ, ವೆಂಕಬರಾವ್ ಜಗತಾಪ್, ಬಿಜೆಪಿ ನಗರಮಂಡಲ ಉಪಾಧ್ಯಕ್ಷ ರಾಕೇಶ್ ರಾವ್, ಪ್ರಶಾಂತ್ ಘಾಟ್ಕೆ, ಸುರ್ದಶನ್, ಪಾಂಡುರಂಗರಾವ್, ದೇವರಾಜ ನಾಯ್ಕ, ಸ್ವಾಮಿನಾಯ್ಕ, ಬಸವಯ್ಯ, ಪುಟ್ಟಶೆಟ್ಟಿ, ರವೀಶ್‌ಗೌಡ ಇತರರಿದ್ದರು.

ಕೆರೆಗಳಿಗೆ ನೀರು ತುಂಬಿಸಿ: ಗಾವಡಗೆರೆ ಹೋಬಳಿ ವ್ಯಾಪ್ತಿಯಲ್ಲಿರುವ ಕೆರೆಗಳಿಗೆ ಹಾರಂಗಿ ನಾಲೆಯಿಂದ ನೀರು ತುಂಬಿಸುವ ಕಾರ್ಯ ಆಗಿಬೇಕಿದೆ. ಹಾರಂಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಕಾರ್ಯಪ್ರವೃತ್ತರಾಗಬೇಕು. ಇಲ್ಲದಿದ್ದರೆ ರೈತರೊಂದಿಗೆ ಹೋರಾಟ ಆರಂಭಿಸುವುದಾಗಿ ಸತ್ಯಪ್ಪ ಎಚ್ಚರಿಸಿದರು.