ಬೆಂಗಳೂರು: ಪಶುಗಳಿಗೆ ಮೇವಿನ ಕೊರತೆ ಉಂಟಾಗದಿರಲು ರೈತರು ತಮ್ಮ ಹೊಲದಲ್ಲೇ ಅಗತ್ಯ ಮೇವನ್ನು ಬೆಳೆಯಲು ಆದ್ಯತೆ ನೀಡಬೇಕು. ಈ ರೀತಿ ಮಾಡುವುದರಿಂದ ಅನ್ಯರ ಮೇಲೆ ಅವಲಂಬನೆ ತಪ್ಪಿಸುವ ಜತೆಗೆ ಜಾನುವಾರುಗಳಿಗೆ ಪೌಷ್ಟಿಕಯುಕ್ತ ಮೇವನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಭಾರತೀಯ ಹುಲ್ಲುಗಾವಲು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಅಮರೇಶ ಚಂದ್ರ ತಿಳಿಸಿದರು.
ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಶನಿವಾರ ಆರಂಭವಾದ ಮೂರು ದಿನಗಳ ‘ಸುಸ್ಥಿರ ಪರಿಸರಸ್ನೇಹಿ ಹುಲ್ಲುಗಾವಲು, ಮೇವು ಮತ್ತು ಪ್ರಾಣಿವಿಜ್ಞಾನ ನಾವಿನ್ಯತೆಯಿಂದ ಭವಿಷ್ಯದ ಪೋಷಣೆ’ ಕುರಿತ ಜಾಗತಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕ್ಷೀರ ಉತ್ಪಾದನೆಯಲ್ಲಿ ವಿಶ್ವದಲ್ಲೇ ಭಾರತವು ಪ್ರಥಮ ಸ್ಥಾನದಲ್ಲಿದೆ. ಹೀಗಿದ್ದರೂ ವಿಶ್ವದ ಹಾಲು ಉತ್ಪಾದನೆಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸರಾಸರಿ ಉತ್ಪಾದಕತೆಯಿಂದ ಕಡಿಮೆ ಇದೆ. ಇದಕ್ಕೆ ಉತ್ಕ ೃಷ್ಟ ಮೇವು, ರಸಮೇವು, ಪಶು ಆಹಾರ ಹಾಗೂ ತಾಂತ್ರಿಕತೆಯ ಕೊರತೆ ಕಾಡುತ್ತಿದೆ. ದೇಶದಲ್ಲಿ 20 ದಶಲಕ್ಷ ಹೆಕ್ಟೇರ್ ಹುಲ್ಲುಗಾವಲು ಇದ್ದರೂ, ಶೇ.12 ಹಸಿ ಮೇವು, ಶೇ.23 ಒಣ ಮೇವು ಹಾಗೂ ಶೇ.24 ಪಶು ಆಹಾರದ ಕೊರತೆ ಇದೆ. ಈ ಸಮಸ್ಯೆಯನ್ನು ನೀಗಿಸಲು ರೈತರು ತಮ್ಮ ಹೊದಲ್ಲಿ ಶೇ. 10 ಜಾಗದಲ್ಲಿ ಹುಲ್ಲು ಬೆಳೆಯಲು ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಪಶುವೈದ್ಯಕೀಯ ವಿವಿ ಕುಲಪತಿ ಡಾ. ಕೆ.ಸಿ.ವೀರಣ್ಣ ಮಾತನಾಡಿ, ಹೈನುಗಾರಿಕೆಯಲ್ಲಿ ಪಶುಗಳ ಆರೋಗ್ಯ ಪ್ರಮುಖವಾಗಿ ಮೇವಿನ ಗುಣಮಟ್ಟ ಹಾಗೂ ಪಶು ಆಹಾರದ ಮೇಲೆ ಅವಲಂಬಿತವಾಗಿದೆ. ಇತ್ತೀಚಿಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪಶುಗಳು ಸೇವಿಸುವ ಮೇವಿನಲ್ಲಿ ಭಾರ ಲೋಹ ಕಂಡುಬರುತ್ತಿದೆ. ಇದು ಮನುಷ್ಯನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಲಿದ್ದು, ಅರಣ್ಯ ಕೃಷಿಯಿಂದ ಮೇವನ್ನು ಉತ್ಪಾದಿಸುವ ಅಗತ್ಯ ಇದೆ ಎಂದರು.
ಕಾರ್ಯಕ್ರಮದಲ್ಲಿ ನಬಾರ್ಡ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಪಿ.ದಿನೇಶ್, ಐಸಿಎಆರ್‌ನ ಎಡಿಡಿ ಡಾ. ಎಸ್.ಕೆ.ಪ್ರಧಾನ್, ಮಥುರಾ ಸಂಸ್ಕೃತಿ ವಿವಿಯ ಕುಲಪತಿ ಡಾ. ಎಂ.ಬಿ.ಚೆಟ್ಟಿ ಹಾಗೂ ಇತರ ಗಣ್ಯರು ಹಾಜರಿದ್ದರು.
ರೈತರು ಪಶು ಆಹಾರದ ಮೇಲೆ ಹೆಚ್ಚು ಅವಲಂಬಿಸಿರುವುದರಿಂದ ಇಂದು ಹೈನುಗಾರಿಕೆ ಲಾಭದಾಯಕವಾಗಿಲ್ಲ. ಖರ್ಚು, ವೆಚ್ಚವನ್ನು ಕಡಿಮೆ ಮಾಡಲು ಪೌಷ್ಟಿಕವಾದ ಮೇವನ್ನು ಪಶುಗಳಿಗೆ ನೀಡಬೇಕಿದೆ.
- ಡಾ. ಎಸ್.ವಿ.ಸುರೇಶ್, ಬೆಂ. ಕೃಷಿ ವಿವಿ ಕುಲಪತಿ