ನರಗುಂದ: ಮಳೆಯಿಂದ ಹಾನಿಯಾದ ಬೆಳೆಗಳಿಗೆ ವಿಮೆ ಹಾಗೂ ಮಧ್ಯಂತರ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಇನ್ಶೂರೆನ್ಸ್ ಕಂಪನಿ ಸಿಬ್ಬಂದಿಯನ್ನು ರೈತ ಸಂಪರ್ಕ ಕಚೇರಿಯಲ್ಲಿ ಕೂಡಿ ಹಾಕಿ ಪ್ರತಿಭಟಿಸಿದ ಘಟನೆ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಸೋಮವಾರ ನಡೆದಿದೆ.
2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಪರೀತ ಮಳೆ ಸುರಿದ ಪರಿಣಾಮ ಕೊಣ್ಣೂರ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದಿದ್ದ ಗೋವಿನಜೋಳ, ಹೆಸರು, ಹತ್ತಿ ಹಾಗೂ ಉಳ್ಳಾಗಡ್ಡಿ ಬೆಳೆಗಳು ಹಾಳಾಗಿವೆ. ಈ ಎಲ್ಲ ಬೆಳೆಗಳಿಗೂ ವಿಮೆ ಕಂತು ತುಂಬಿದ್ದೇವೆ. ಆದರೆ, ಓರಿಯಂಟಲ್ ಇನ್ಶೂರೆನ್ಸ್ ಕಂಪನಿ ಸಿಬ್ಬಂದಿ ತಮಗೆ ಬೇಕಾದವರಿಗೆ ಮಾತ್ರ ವಿಮೆ ಹಣ ಪಾವತಿಸುತ್ತಿದ್ದಾರೆ. ಬಹುತೇಕ ರೈತರಿಗೆ ಇನ್ನೂ ಬೆಳೆ ವಿಮೆ ಹಣ ಬಂದಿಲ್ಲ. ಅತಿವೃಷ್ಟಿಯಿಂದ ಬೆಳೆ ಹಾನಿ ಅನುಭವಿಸಿದ ರೈತರಿಗೆ ಮಧ್ಯಂತರ ಪರಿಹಾರ ನೀಡುವಂತೆ ಸರ್ಕಾರದಿಂದ ನಿರ್ದೇಶನವಿದ್ದರೂ ನಯಾಪೈಸೆ ಪರಿಹಾರ ಕೊಟ್ಟಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಸುದ್ದಿ ತಿಳಿದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಜನಮಟ್ಟಿ ಅವರು ಕೊಣ್ಣೂರ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಇನ್ಶೂರೆನ್ಸ್ ಕಂಪನಿ ಸಿಬ್ಬಂದಿಯನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸಿಡಿಮಿಡಿಗೊಂಡ ರೈತರು, ನಮ್ಮ ಬೆಳೆಗಳು ಹಾಳಾದರೆ ಅವುಗಳಿಗೆ ವಿಮೆ ಹಣ ಬರಲಿದೆ ಎಂಬ ಆಸೆಯಿಂದ ಲಕ್ಷಾಂತರ ರೂ. ವಿಮೆ ಕಂತು ಪಾವತಿಸಿದ್ದೇವೆ. ಆದರೆ, ಕಂಪನಿಯು ಕೆಲ ರೈತರಿಗೆ ಮಾತ್ರ ವಿಮೆ ಹಣ ವಿತರಿಸಿ ತಾರತಮ್ಯ ಎಸಗಿದೆ. ಈ ಕುರಿತು ಕೇಳಿದರೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಸರ್ಕಾರದ ಪರಿಹಾರವನ್ನು ಪಾವತಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ಶೂರೆನ್ಸ್ ಕಂಪನಿ ಸಿಬ್ಬಂದಿಯನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಆತನನ್ನು ಮಂಗಳವಾರ ನರಗುಂದದ ಕೃಷಿ ಇಲಾಖೆ ಕಚೇರಿಗೆ ನೂರಾರು ರೈತರೊಂದಿಗೆ ಕರೆದುಕೊಂಡು ಬರುತ್ತೇವೆ. ಅಲ್ಲಿ ಪ್ರತಿಯೊಬ್ಬ ರೈತರಿಗೆ ಬೆಳೆ ವಿಮೆ, ಮಧ್ಯಂತರ ಪರಿಹಾರ, ಬೆಳೆ ಹಾನಿ ಪರಿಹಾರ ಹಣ ಪಾವತಿಸುವ ಕುರಿತು ಜಂಟಿ ಕೃಷಿ ನಿರ್ದೇಶಕ, ಉಪ ನಿರ್ದೇಶಕ ಹಾಗೂ ಇನ್ಶೂರೆನ್ಸ್ ಕಂಪನಿ ಹಿರಿಯ ಅಧಿಕಾರಿಗಳಿಂದ ಸ್ಪಷ್ಟನೆ ಕೊಡಿಸಬೇಕು. ಇಲ್ಲದಿದ್ದರೆ ನರಗುಂದದ ಕೃಷಿ ಇಲಾಖೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಜನಮಟ್ಟಿ ಅವರು, ಕೃಷಿ ಇಲಾಖೆ ಹಿರಿಯ ಅಧಿಕಾರಿಗಳನ್ನು ಮಂಗಳವಾರ ನರಗುಂದಕ್ಕೆ ಕರೆದುಕೊಂಡು ಬರುವುದಾಗಿ ಭರವಸೆ ನೀಡಿ, ಕೂಡಿ ಹಾಕಲಾಗಿದ್ದ ಇನ್ಶೂರೆನ್ಸ್ ಕಂಪನಿ ಸಿಬ್ಬಂದಿ ಬಿಟ್ಟು ಸ್ಥಳದಿಂದ ನಿರ್ಗಮಿಸಿದರು.
ನಾನವನಲ್ಲ... ನನ್ನನ್ನು ಕೈಬಿಡಿ...: ಕೊಣ್ಣೂರಿನ ರೈತ ಸಂಪರ್ಕ ಕೇಂದ್ರಕ್ಕೆ ತಾಲೂಕು ಓರಿಯಂಟಲ್ ಇನ್ಶೂರೆನ್ಸ್ ಕಂಪನಿ ಸಿಬ್ಬಂದಿ ಕರಿಯಪ್ಪ ಹಿರೇಕುರುಬರ ಬರಬೇಕಾಗಿತ್ತು. ಇತ್ತೀಚೆಗೆ ಆತ ಮದುವೆ ಆಗಿದ್ದರಿಂದ ಬದಲಾಗಿ ಮುಂಡರಗಿ ತಾಲೂಕಿನ ಕನಕಕುಮಾರ ಎಂಬುವರನ್ನು ಕಂಪನಿ ಮೇಲಧಿಕಾರಿಗಳು ಕಳುಹಿಸಿಕೊಟ್ಟಿದ್ದರು. ಅಧಿಕಾರಿಗಳ ಮೇಲಿನ ಕೋಪಕ್ಕೆ ಅಮಾಯಕ ಕನಕಕುಮಾರ ಸಿಲುಕಿಕೊಂಡಿದ್ದರು. ಕನಕಕುಮಾರ ನಾನು ನರಗುಂದ ತಾಲೂಕಿನವನಲ್ಲ. ನನ್ನನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿದರು. ಆದರೆ, ರೈತರು ಮಾತ್ರ ‘ನಿಮ್ಮನ್ನು ಬಿಡಬೇಕಾದರೆ ನಿಮ್ಮ ಕಂಪನಿ ಮೇಲಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ’ ಎಂದು ಪಟ್ಟು ಹಿಡಿದು ಕಚೇರಿಯಲ್ಲಿ ಕೂಡಿ ಹಾಕಿದರು.
ಪ್ರತಿಭಟನೆಯಲ್ಲಿ ಶಂಕರಗೌಡ ಶಿರಿಯಪ್ಪಗೌಡ್ರ, ಸತೀಶ ಕರಿಯಪ್ಪನವರ, ಮೌನೇಶ ಯಲ್ಲಪ್ಪಗೌಡ್ರ, ಫಕೀರಪ್ಪ ಅಣ್ಣಿಗೇರಿ, ದಾದಾಖಲಂದರ ಆಸೇಖಾನ್, ಅಶೋಕ ಕಾಮಣ್ಣವರ, ತಿಮ್ಮರಡ್ಡಿ ವಾಸನ, ಶಿವನಗೌಡ ಗಿರಿಯಪ್ಪಗೌಡ್ರ, ಶಂಕರಗೌಡ ಕರಿಗೌಡ್ರ, ಶಿವಾನಂದ ಶಿರಹಟ್ಟಿ, ಸುನೀಲಗೌಡ ಪಾಟೀಲ, ವೆಂಕನಗೌಡ ಶಿರಿಯಪ್ಪಗೌಡ್ರ, ಷಣ್ಮುಖ ಹುರಕಡ್ಲಿ, ಮಲ್ಲನಗೌಡ ಶಿರಿಯಪ್ಪಗೌಡ್ರ, ವೆಂಕಣ್ಣ ವಾಸನ, ಕೆಂಪನಗೌಡ್ರ, ಇತರರಿದ್ದರು.