ಧಾರವಾಡ: ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ರೈತರ ಕೃಷಿ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ, ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಹೈಕೋರ್ಟ್, ಕೈಗಾರಿಕೆ ಸ್ಥಾಪನೆಗೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಇದೀಗ ಧಾರವಾಡ- ಕಿತ್ತೂರು- ಬೆಳಗಾವಿ ರೈಲು ಮಾರ್ಗದ ಸರದಿ.
ಕೇಂದ್ರ ಸರ್ಕಾರದ ಯೋಜನೆಯ ಅನುಷ್ಠಾನಕ್ಕಾಗಿ ರೈತರಿಗೆ ಭೂಸ್ವಾಧೀನ ನೋಟಿಸ್ ನೀಡಲಾಗಿದೆ. ಆದರೆ, ಅಳಿದುಳಿದ ಜಮೀನು ಬಿಟ್ಟುಕೊಡಲು ರೈತರು ಸುತಾರಾಂ ಒಪ್ಪುತ್ತಿಲ್ಲ.
ನಗರದಿಂದ ಬೆಳಗಾವಿ ಮಾರ್ಗವಾಗಿ ಹೊರಟರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊದಲು ಸಿಗುವ ಗ್ರಾಮ ಮುಮ್ಮಿಗಟ್ಟಿ. ಅದಕ್ಕೆ ಹೊಂದಿಕೊಂಡೇ ಧಾರವಾಡ ಹೈಕೋರ್ಟ್ ಪೀಠ, ಬೇಲೂರು ಕೈಗಾರಿಕಾ ಪ್ರದೇಶವಿದೆ. ಮತ್ತೊಂದೆಡೆ ಐಐಟಿ ಕ್ಯಾಂಪಸ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಇವೆಲ್ಲವೂ ಧಾರವಾಡಕ್ಕೆ ಬರಬೇಕಾದರೆ ಮುಮ್ಮಿಗಟ್ಟಿ ಗ್ರಾಮದ ರೈತರ ಭೂಮಿ ತ್ಯಾಗವೇ ಕಾರಣ. ಈ ಹಿಂದೆ ಸುಮಾರು 5,000 ಎಕರೆ ಜಮೀನು ಹೊಂದಿದ್ದ ಗ್ರಾಮದ ರೈತರಿಗೆ ಈಗ ಉಳಿದಿರುವುದು 60ರಿಂದ 100 ಎಕರೆ ಮಾತ್ರ. ಪರಿಣಾಮ ಭೂಮಿ ಕಳೆದುಕೊಂಡ ರೈತರು ಕೃಷಿಯಿಂದ ವಿಮುಖರಾಗಿ ಕಾರ್ಖಾನೆಗಳಲ್ಲಿ ಕೂಲಿಕಾರರಾಗಿ ಕೆಲಸ ಮಾಡುವಂತಾಗಿದೆ.
ಮಲೆನಾಡು ಮತ್ತು ಬೆಳವಲ ಸೀಮೆಯ ಸೆರಗಿನಲ್ಲಿರುವ ಮುಮ್ಮಿಗಟ್ಟಿ ಗ್ರಾಮದ ಸುತ್ತ ಭತ್ತದ ಗದ್ದೆಗಳಿದ್ದವು. ಹತ್ತಿ, ತೊಗರಿ, ಗೋವಿನಜೋಳ, ಶೇಂಗಾ ಬೆಳೆಯುತ್ತಿದ್ದರು. ಜೊತೆಗೆ ಮಾವು, ತೆಂಗಿನ ತೋಟಗಳು ನಳನಳಿಸುತ್ತಿದ್ದವು. ಮೊದಲಿಗೆ 1956ರಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ- 4 ನಿರ್ವಣಕ್ಕೆ ಜಮೀನು ಬಿಟ್ಟುಕೊಟ್ಟರು. 1980ರಿಂದ ಈವರೆಗೆ ಕೈಗಾರಿಕೆಗಳು, ಶೈಕ್ಷಣಿಕ ಸಂಸ್ಥೆಗಳು, ಹೈಕೋರ್ಟ್ ಹಾಗೂ ಕೆಐಎಡಿಬಿಗಾಗಿ ಸುಮಾರು 4,300 ಎಕರೆ ಜಮೀನು ಕಳೆದುಕೊಂಡಿದ್ದಾರೆ. 450ಕ್ಕೂ ಹೆಚ್ಚು ರೈತ ಕುಟುಂಬಗಳು ಇಲ್ಲಿವೆ.
ಅಳಿದುಳಿದ ಜಮೀನುಗಳ ಮಧ್ಯೆ ಇದೀಗ ಧಾರವಾಡ- ಬೆಳಗಾವಿ ರೈಲು ಮಾರ್ಗ ಹಾದುಹೋಗಲಿದೆ. ರೈಲ್ವೆ ಇಲಾಖೆಯಿಂದ ಈಗಾಗಲೇ ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ಈ ರೈಲು ಮಾರ್ಗ ಮುಮ್ಮಿಗಟ್ಟಿಯ ಜಮೀನುಗಳನ್ನು ಇಬ್ಭಾಗಪಡಿಸುವ ಆತಂಕ ರೈತರದ್ದು. ಈಗಾಗಲೇ ವಶಪಡಿಸಕೊಂಡಿರುವ ಜಮೀನಿನಲ್ಲಿ ರೈಲು ಮಾರ್ಗ ನಿರ್ವಿುಸಿ ಎಂಬುದು ರೈತರ ಬೇಡಿಕೆ.
ಏನಿದು ಯೋಜನೆ…?: ಧಾರವಾಡ- ಕಿತ್ತೂರು- ಬೆಳಗಾವಿ ಮೂಲಕ 73 ಕಿಮೀ ಹೊಸ ರೈಲ್ವೆ ಬ್ರಾಡ್ಗೇಜ್ ರೈಲು ಯೋಜನೆ ಇದಾಗಿದೆ. ಧಾರವಾಡದಿಂದ ಕೆಲಗೇರಿ, ಚಿಕ್ಕಮಲ್ಲಿಗವಾಡ, ಮುಮ್ಮಿಗಟ್ಟಿ, ಬೇಲೂರು, ಹೆಗ್ಗೇರಿ, ಕೋಟೂರು, ಶಿಂಗನಾಯಕನಕೊಪ್ಪ, ಕುಮ್ಮನಾಯ್ಕನಕೊಪ್ಪ, ಬೋಗೂರು ಮತ್ತು ಹಳೇತೇಗೂರು ಹಾದುಹೋಗಲಿದೆ.
ಮುಮ್ಮಿಗಟ್ಟಿ ಗ್ರಾಮದ ರೈತರು ಕೇಂದ್ರ- ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಿಗಾಗಿ ಜಮೀನು ನೀಡಿದ್ದಾರೆ. ಶೇ. 90ರಷ್ಟು ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದೀಗ ರೈಲು ಮಾರ್ಗ ನಿರ್ವಣಕ್ಕಾಗಿ ರೈತರಿಗೆ ಭೂಸ್ವಾಧೀನ ನೋಟಿಸ್ ನೀಡಿದ್ದಾರೆ. ಇದರಿಂದ ಜಮೀನುಗಳು ಇಬ್ಭಾಗ ಆಗುತ್ತವೆ. ಈಗಾಗಲೇ ವಶಪಡಿಸಿಕೊಂಡ ಜಮೀನಿನಲ್ಲೇ ರೈಲು ಮಾರ್ಗ ನಿರ್ವಿುಸಲು ಜಿಲ್ಲಾಧಿಕಾರಿ, ಕೆಐಎಡಿಬಿ ಅಧಿಕಾರಿಗಳನ್ನು ಕೋರಿದ್ದೇವೆ.- ಬಸವರಾಜ ಮರಿತಮ್ಮನವರ, ಮುಮ್ಮಿಗಟ್ಟಿ ಗ್ರಾಮದ ಮುಖಂಡಮುಮ್ಮಿಗಟ್ಟಿ ಗ್ರಾಮದ ಪಕ್ಕ ಧಾರವಾಡ- ಬೆಳಗಾವಿ ನೂತನ ರೈಲು ಮಾರ್ಗ ನಿರ್ಮಾಣ ಯೋಜನೆ ಸಂಬಂಧ ತಯಾರಿ ನಡೆದಿದೆ. ಈ ಸಂಬಂಧ ಭೂಸ್ವಾಧೀನಕ್ಕಾಗಿ ಕೆಐಎಡಿಬಿಯು ರೈತರಿಗೆ ಪ್ರಾಥಮಿಕ ನೋಟಿಸ್ ನೀಡಿದೆ. ಜಮೀನುಗಳು ಇಬ್ಭಾಗವಾಗುವ ಆತಂಕದಿಂದ ರೈಲು ಮಾರ್ಗ ಬದಲಾವಣೆ ಕೋರಿ ರೈತರು ಮನವಿ ನೀಡಿದ್ದಾರೆ. ಸರ್ಕಾರದ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.- ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ, ಧಾರವಾಡ