ನ್ಯೂಸ್

ಭವಿಷ್ಯದ ಹಾದಿ ಚರ್ಚೆಗೆ ಸಮಿತಿ ರಚನೆ - ಸರ್ಕಾರದ ಮಾತುಕತೆ ಪ್ರಸ್ತಾವನೆಗೆ ಶೀಘ್ರ ಪ್ರತಿಕ್ರಿಯೆ

ನವದೆಹಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧದ ಆಂದೋಲನದ ಭವಿಷ್ಯದ ಹಾದಿಯ ಬಗ್ಗೆ ರ್ಚಚಿಸಿ, ನಿರ್ಧಾರ ಕೈಗೊಳ್ಳುವ ಸಲುವಾಗಿ ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಐವರು ಸದಸ್ಯರ ಸಮಿತಿಯನ್ನು ರಚಿಸಿದೆ. ಇದರಲ್ಲಿ ಪ್ರೇಮ್ ಸಿಂಗ್ ಬಂಗು (ಅಖಿಲ ಭಾರತ ಕಿಸಾನ್ ಫೆಡರೇಶನ್), ಹರಿಂದರ್ ಸಿಂಗ್ ಲಖೋವಾಲ್ ಮತ್ತು ಕುಲದೀಪ್ ಸಿಂಗ್ ಕೂಡ ಇದ್ದಾರೆ.

ಮಾತುಕತೆಗೆ ಬನ್ನಿ ಎಂದು ಕೇಂದ್ರ ಸರ್ಕಾರ ರೈತರ ಮುಖಂಡರಿಗೆ ಭಾನುವಾರ ನೀಡಿರುವ ಹೊಸ ಪ್ರಸ್ತಾವನೆಯ ಕುರಿತೂ ಈ ಸಮಿತಿ ಸದಸ್ಯರು ಶೀಘ್ರದಲ್ಲೇ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಕೇಂದ್ರಕ್ಕೆ ನೀಡುವ ಪ್ರತಿಕ್ರಿಯೆಯ ಕರಡು ಪ್ರತಿಯನ್ನು ಈ ಸಮಿತಿಯು ಅಖಿಲ ಭಾರತ ಸಂಯುಕ್ತಾ ಕಿಸಾನ್ ಮೋರ್ಚಾದ 40 ಸದಸ್ಯರ ಮುಂದೆ ಇಡಲಿದೆ. ಸದಸ್ಯರು ಒಪ್ಪಿಗೆ ಸೂಚಿಸಿದರೆ ಅದನ್ನು ಕೇಂದ್ರಕ್ಕೆ ನೀಡಲಾಗುತ್ತದೆ. ಈ ಮಧ್ಯೆ, ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬುಧವಾರ 28ನೇ ದಿನಕ್ಕೆ ಕಾಲಿಟ್ಟಿದೆ.

ಯಾವುದೇ ಸಮಯದಲ್ಲೂ ಚರ್ಚೆಗೆ ಸಿದ್ಧ : ಕೇಂದ್ರ ಸರ್ಕಾರವು ರೈತರ ಅನುಕೂಲಕ್ಕಾಗಿ ಯಾವುದೇ ಸಮಯದಲ್ಲಿ ಚರ್ಚೆಗೆ ಸಿದ್ಧವಾಗಿದೆ. ರೈತ ಸಂಘಟನೆಗಳು ಹೊಸ ಕೃಷಿ ಕಾಯ್ದೆಯಲ್ಲಿ ಬಯಸುವ ಯಾವುದೇ ಬದಲಾವಣೆಗೆ ಪ್ರಸ್ತಾವ ಸಲ್ಲಿಸಬಹುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಕಿಸಾನ್ ದಿವಸ, ರೈತರ ಉಪವಾಸ: ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನಾಚರಣೆ ನಿಮಿತ್ತ ಡಿ. 23ರಂದು ಆಚರಿಸಲಾಗುವ ರೈತರ ದಿನ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ರೈತರು ಉಪವಾಸ ನಿರಶನ ನಡೆಸಿದರು. ಪ್ರತಿಭಟನೆಯನ್ನು ಬೆಂಬಲಿಸಲು ದೇಶಾದ್ಯಂತದ ರೈತರೂ ಒಂದೊತ್ತಿನ ಊಟ ಬಿಡಬೇಕು ಎಂದು ರೈತ ಸಂಘಟನೆಗಳು ಕರೆ ನೀಡಿದ್ದವು.

ತಿದ್ದುಪಡಿ ಪ್ರಸ್ತಾವನೆ ಪುನರಾವರ್ತಿಸಬೇಡಿ: ನೂತನ ಕೃಷಿ ಕಾಯ್ದೆಗಳ ಕುರಿತು ತಾವು ಈಗಾಗಲೇ ತಿರಸ್ಕರಿಸಿರುವ ಅರ್ಥಹೀನ ತಿದ್ದುಪಡಿಗಳ ಪ್ರಸ್ತಾವನೆಯನ್ನು ಪುನರಾವರ್ತಿಸಬೇಡಿ ಎಂದು ರೈತ ಪರ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಹೇಳಿವೆ. ನಾವು ಮಾತುಕತೆಗೆ ಸಿದ್ಧರಿದ್ದೇವೆ. ಆದರೆ ಮತ್ತೊಂದು ಸುತ್ತಿನ ಮಾತುಕತೆಗೆ ಲಿಖಿತ ರೂಪದಲ್ಲಿ ಹೊಸದಾಗಿ ಪ್ರಸ್ತಾವನೆಯನ್ನು ಕಳುಹಿಸಬೇಕು ಎಂದು ರೈತ ಮುಖಂಡ ಶಿವಕುಮಾರ್ ಕಕ್ಕಾ ಹೇಳಿದ್ದಾರೆ. ಸರ್ಕಾರ ಮುಕ್ತ ಮನಸ್ಸಿನಿಂದ ವೇದಿಕೆಗೆ ಬರಬೇಕು ಎಂದು ಸ್ವರಾಜ್ ಇಂಡಿಯಾದ ಮುಖ್ಯಸ್ಥ ಯೋಗೇಂದ್ರ ಯಾದವ್ ಹೇಳಿದ್ದಾರೆ.

ಚರಣ್ ಸಿಂಗ್​ಗೆ ನಾಯಕರ ನಮನ : ರೈತರ ದಿನಾಚರಣೆ ನಿಮಿತ್ತ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್​ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನಮನ ಸಲ್ಲಿಸಿದರು. ಚರಣ್ ಸಿಂಗರು ಜೀವನದುದ್ದಕ್ಕೂ ಹಳ್ಳಿಗಳು ಮತ್ತು ರೈತರ ಅಭಿವೃದ್ಧಿಗೆ ಕೆಲಸ ಮಾಡಿದರು. ಹಲವಾರು ರೈತ ಸ್ನೇಹಿ ನೀತಿಗಳನ್ನು ರೂಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ ಸಿಂಗ್ ಸೇರಿದಂತೆ ಅನೇಕ ಗಣ್ಯರು ಚರಣ್ ಸಿಂಗ್​ಗೆ ಗೌರವಾರ್ಪಣೆ ಮಾಡಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..