ಹರಿಯಾಣ: ಭಾರತದ ಕೆಲವು ಕಡೆ ಈಗ್ಲೂ ಸರಿಯಾದ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿಯೇ ಜೀವನ ಸಾಗಿಸ ಬೇಕಾಂದಂತಹ ಪರಿಸ್ಥಿತಿ ಇದೆ. ಹರ್ಯಾಣದ ಜಜ್ಜರ್ ಪ್ರದೆಶದಲ್ಲಿ ವಾಸಿಸುತ್ತಿರುವಂತಹ ರೈತರ ಪರಿಸ್ಥಿತಿಯೂ ಹೇಳ ತೀರದು.
ಜಜ್ಜರ್ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಸಿಕ್ಕಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಕುಟುಂಬಸ್ಥರು ಸ್ವಂತ ವಿದ್ಯುತ್ ತಯಾರಿಸುವ ಯೋಜನೆ ರೂಪಿಸಿದ್ದಾರೆ. ವಿದ್ಯುತ್ ತಯಾರಿಸಿ ಬಳಕೆ ಮಾಡೋದು ಮಾತ್ರವಲ್ಲ ವಿದ್ಯುತ್ ಮಾರಾಟ ಮಾಡುವ ಕೆಲಸವನ್ನು ಕೂಡ ಮಾಡ್ತಿದ್ದಾರೆ.
ಈ ಕುಟುಂಬ ಕೋಳಿ ಹಿಕ್ಕೆಗಳಿಂದ ಸುಮಾರು 50 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಕೋಳಿ ಫಾರಂನಲ್ಲಿಯೇ , ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಸಲಕರಣೆಗಳನ್ನು ಅಳವಡಿಸಲಾಗಿದ್ದು, 24 ಗಂಟೆಗಳ ಕಾಲ ಇಲ್ಲಿ ವಿದ್ಯುತ್ ಉತ್ಪಾದನೆ ನಡೆಯುತ್ತಿರುತ್ತದೆ.
ಜಜ್ಜರ್‌ನ ಸಿಲಾನಿ ಕೇಶೋ ಗ್ರಾಮದ ನಿವಾಸಿ ರಾಮೇಹರ್ ಎಂಬಾತ ವಿದ್ಯುತ್ ಸಂಪರ್ಕಕ್ಕಾಗಿ ಹಲವು ಬಾರಿ ವಿದ್ಯುತ್ ನಿಗಮಕ್ಕೆ ಭೇಟಿ ನೀಡಿದ್ದರು. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಸಂಪರ್ಕ ಸಿಕ್ಕಿರಲಿಲ್ಲ. ಇದಕ್ಕಾಗಿ ಕೃಷಿ ಇಲಾಖೆಯ ನೆರವು ಪಡೆದ ರೈತ ರಾಮೇಹರ್, ತಮ್ಮ ಮನೆಯಲ್ಲಿ 20 ಸಾವಿರ ಕೋಳಿಗಳನ್ನು ಸಾಕಿದ್ರು. ರಾಮೇಹರ್ ಆರಂಭದಲ್ಲಿ ಕೋಳಿ ಹಿಕ್ಕೆಗಳಿಂದ ಗ್ಯಾಸ್ ತಯಾರಿಸಿದ್ರು.
ಅದನ್ನು ತನ್ನ ಮನೆಯ ಅಗತ್ಯಕ್ಕೆ ಬಳಸಿಕೊಳ್ಳುತ್ತಿದ್ದರು. ನಂತ್ರ ವಿದ್ಯುತ್ ತಯಾರಿ ಶುರು ಮಾಡಿದ್ರು. ಈಗ ರಾಮಹೆರ್ ಮನೆ ಪ್ರವಾಸಿ ಕೇಂದ್ರದಂತಾಗಿದೆ. ಇಲ್ಲಿಗೆ ದೇಶ – ವಿದೇಶಗಳಿಂದ ಜನರು ಬರ್ತಾರೆ.
ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ್ದ ರಾಮಹೆರ್!
ಭಾರತೀಯ ಸೇನೆಯಲ್ಲಿ ಕೆಲಸ ಮಾಡ್ತಿದ್ದ ರಾಮಹೆರ್ ಸುಬೇದಾರ್ ಹುದ್ದೆಯಿಂದ ನಿವೃತ್ತರಾದ ನಂತರ ಕೋಲಿ ಫಾರಂ ತೆರೆದಿದ್ದರು. ಈ ಹಿಂದೆ 85 ಮತ್ತು 85 ಕ್ಯೂಬಿಕ್ ಮೀಟರ್ ನ ಎರಡು ಟ್ಯಾಂಕ್ ಗಳನ್ನು ತಯಾರಿಸಿ ಅದರಿಂದ ಗ್ಯಾಸ್ ತಯಾರಿಸುತ್ತಿದ್ದರು. ನಂತರ 50 ರಷ್ಟು ಗ್ಯಾಸ್ ಮತ್ತು 50 ರಷ್ಟು ಡೀಸೆಲ್‌ನೊಂದಿಗೆ ಜನರೇಟರ್ ಚಲಾಯಿಸಿ, 30 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸಲು ಪ್ರಾರಂಭಿಸಿದ್ರು.
24 ಗಂಟೆ ವಿದ್ಯುತ್ ತಯಾರಿ ಕೆಲಸ ನಡೆಯುತ್ತದೆ. ರಾಮಹೆರ್ ತಮ್ಮ ಮನೆಗೆ ವಿದ್ಯುತ್ ಬಳಕೆ ಮಾಡುವುದಲ್ಲದೆ ಅದನ್ನು ಮಾರಾಟ ಮಾಡುತ್ತಾರೆ. ಕೋಳಿ ಹಿಕ್ಕೆಯಿಂದಲೂ ಸಿಎನ್‌ಜಿ ತಯಾರಿಸುವ ಪ್ರಯತ್ನ ಮಾಡಿದ್ದು, ಈ ಪ್ರಯತ್ನ ಇದುವರೆಗೂ ಸಫಲವಾಗಿಲ್ಲ ಎನ್ನುತ್ತಾರೆ ರಾಮೆಹರ್.