ಹನೂರು: ತಾಲೂಕಿನ ಮಂಚಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕಾಡು ಪ್ರಾಣಿಗಳಿಂದ ಫಸಲನ್ನು ಉಳಿಸಿಕೊಳ್ಳುವ ಸಲುವಾಗಿ ಕಾವಲು ಕಾಯಲು ಜಮೀನಿಗೆ ತೆರಳಿದ್ದ ರೈತನ ಮೇಲೆ ಕಾಡಾನೆಯೊಂದು ದಾಳಿ ನಡೆಸಿ, ಗಾಯಗೊಳಿಸಿದೆ.
ಗ್ರಾಮದ ವೆಂಕಟಶೆಟ್ಟಿ (65) ಗಾಯಗೊಂಡ ರೈತ. ವೆಂಕಟಶೆಟ್ಟಿ ಅವರು ಈ ಹಿಂದೆ ಜಮೀನಿನಲ್ಲಿ ಮುಸುಕಿನ ಜೋಳದ ಫಸಲನ್ನು ಬೆಳೆದಿದ್ದರು. ಈ ವೇಳೆ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡು ಹಂದಿಗಳು ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸಿದ್ದವು. ನಂತರವೂ ಜಮೀನಿನಲ್ಲಿ ಮುಸುಕಿನ ಜೋಳವನ್ನು ಬೆಳೆದಿದ್ದು, ಕಾಡು ಹಂದಿಗಳಿಂದ ಫಸಲನ್ನು ರಕ್ಷಿಸಿಕೊಳ್ಳುವ ಸಲುವಾಗಿ ಕಾವಲು ಕಾಯಲು ರಾತ್ರಿ ಜಮೀನಿಗೆ ತೆರಳಿ ಪುಟ್ಟ ಗುಡಿಸಲಿನಲ್ಲಿ (ಅಟ್ಟಣ) ಮಲಗಿದ್ದರು. ಸುಮಾರು 12ರ ವೇಳೆಯಲ್ಲಿ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆ ವೆಂಕಟಶೆಟ್ಟಿ ಅವರ ಮೇಲೆ ದಾಳಿ ನಡೆಸಿ ಅಲ್ಲಿಂದ ತೆರಳಿದೆ. ಬೆನ್ನಿನ ಮೂಳೆಗೆ ಗಾಯವಾದ ಇವರು ಮನೆಗೆ ತೆರಳಲು ಸಾಧ್ಯವಾಗದೇ ನರಳಾಡುತ್ತಿದ್ದರು.
ವೆಂಕಟಶೇಟ್ಟಿ ಮನೆಗೆ ಹಿಂತಿರುಗದಿರುವುದರ ಬಗ್ಗೆ ತಿಳಿದ ಕುಟುಂಬಸ್ಥರು ಜಮೀನಿಗೆ ಆಗಮಿಸಿದಾಗ ಕಾಡಾನೆ ದಾಳಿ ನಡೆಸಿ ಗಾಯಗೊಳಿಸಿರುವುದು ಗಮನಕ್ಕೆ ಬಂತು. ಕೂಡಲೇ ಕುಟುಂಬಸ್ಥರು ಇವರನ್ನು ಹನೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದರು. ವೆಂಕಟಶೆಟ್ಟಿ ಅವರು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ರೈತರಲ್ಲಿ ಆತಂಕ: ಮಂಚಾಪುರ ಸಮೀಪದ ಬಸಪ್ಪನದೊಡ್ಡಿ, ಗಂಗನದೊಡ್ಡಿ, ಕಾಂಚಳ್ಳಿ ಜಿ.ಆರ್.ನಗರ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಲ್ಲಿ ಕಳೆದ ಮೂರ‌್ನಾಲ್ಕು ತಿಂಗಳಿನಿಂದ ಚಿರತೆಯೊಂದರ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಜಮೀನಿನ ಕೊಟ್ಟಿಗೆಗಳ ಮೇಲೆ ಲಗ್ಗೆ ಇಟ್ಟು ಆಗಾಗ್ಗೆ ಮೇಕೆಗಳನ್ನು ಬಲಿ ಪಡೆಯುತ್ತಲೇ ಇದೆ. ಇದರಿಂದ ರೈತರು ಭಯದ ನಡುವೆ ದಿನದೂಡುವಂತಾಗಿದೆ.
ಹೀಗಿರುವಾಗ ಇದೀಗ ಕಾಡಾನೆಯೊಂದು ಜಮೀನಿಗೆ ಲಗ್ಗೆ ಇಟ್ಟು ರೈತನ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವುದು ಈ ಭಾಗದ ರೈತರನ್ನು ಸಂಕಷ್ಟಕ್ಕೆ ದೂಡುವಂತಾಗಿದ್ದು, ಆತಂಕ ಮನೆ ಮಾಡಿದೆ. ಆದ್ದರಿಂದ ಕಾಡು ಪ್ರಾಣಿಗಳ ಹಾವಳಿಯ ಕಡಿವಾಣಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.