ಭೋಪಾಲ್: ಮಧ್ಯಪ್ರದೇಶದ ಛತರ್ಪುರ್ ಜಿಲ್ಲೆಯ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಗ್ರಾಮದಲ್ಲಿರುವ ವಿದ್ಯುತ್ ವಿತರಣಾ ಕಂಪನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ.
ಮುನೇಂದ್ರ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ರೈತ. ಸಾಯುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ರೈತ ಡೆತ್ನೋಟ್ ಬರೆದಿಟ್ಟಿದ್ದು, ಮೃತದೇಹವನ್ನು ಸರ್ಕಾರಕ್ಕೆ ಹಸ್ತಾಂತರಿಸಿ, ದೇಹದ ಪ್ರತಿಯೊಂದು ಅಂಗವನ್ನು ಮಾರಾಟ ಮಾಡಿ ಸಾಲ ತೀರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಕರೊನಾ ಸಂಕಷ್ಟದ ನಡುವೆ ಸುಮಾರು 87,000 ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ವಿದ್ಯುತ್ ವಿತರಣ ಕಂಪನಿ (ಡಿಸ್ಕಾಂ) ರೈತನ ಹಿಟ್ಟಿನ ಗಿರಣಿ (ಫ್ಲೋರ್ ಮಿಲ್) ಮತ್ತು ಮೋಟರ್ ಸೈಕಲ್ ವಶಪಡಿಸಿಕೊಂಡಿದ್ದರು ಎಂದು ಮೃತ ರೈತನ ಕುಟುಂಬದವರು ದೂರಿದ್ದಾರೆ.
ರಾಜಕಾರಣಿಗಳು ಮತ್ತು ಉದ್ಯಮಿಗಳು ದೊಡ್ಡ ದೊಡ್ಡ ಹಗರಣಗಳು ಮಾಡಿದಾಗ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇಂತಹ ವ್ಯಕ್ತಿಗಳು ಸಾಲ ಪಡೆದರೆ, ತೀರಿಸಲು ಕಾಲಾವಕಾಶ ನೀಡುತ್ತಾರೆ ಅಥವಾ ಮನ್ನಾ ಮಾಡುತ್ತಾರೆ. ಆದರೆ, ಬಡವರು ಸಣ್ಣ ಪ್ರಮಾಣದ ಸಾಲ ಪಡೆದರೆ ಸಾಲ ಏಕೆ ತೀರಿಸಲು ಆಗುತ್ತಿಲ್ಲ ಎಂದು ಸರ್ಕಾರ ಒಮ್ಮೆಯು ಕಷ್ಟವನ್ನು ಆಲಿಸುವುದಿಲ್ಲ ಎಂದು ಮೃತ ರೈತ ತನ್ನ ಡೆತ್ನೋಟ್ನಲ್ಲಿ ಬರೆದುಕೊಂಡಿದ್ದಾರೆ.
16 ವರ್ಷ ಕೆಳಗಿನ ಮೂವರು ಹೆಣ್ಣುಮಕ್ಕಳು ಮತ್ತು ಓರ್ವ ಮಗನನ್ನು ಬಿಟ್ಟು ರೈತ ಮುನೇಂದ್ರ ರಜಪೂತ್ ಅಗಲಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)