ಮಡಿವಾಳ: ಮೊದಲಿನಿಂದಲೂ ಮಾಲೂರು ತಾಲೂಕಿನ ಹೂವು ಹಾಗೂ ತರಕಾರಿ ಬೆಳೆಗೆ ಪ್ರಸಿದ್ಧವಾಗಿದ್ದು, ಇಲ್ಲಿನ ಸೇವಂತಿ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು. ಆದ್ರೆ, ಈ ಬಾರಿ ಬೆಲೆ ಹಾಗೂ ಬೇಡಿಕೆಯಲ್ಲಿ ಭಾರಿ ಕುಸಿತಗೊಂಡ ಕಾರಣ ಬೆಳೆ ಬೆಳೆದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.
ತಾವು ಹಾಕಿದ ಬಂಡವಾಳ ವಾಪಸ್ ಬಾರದ ಹಿನ್ನಲೆ ಕೆಲ ರೈತರು ತಮ್ಮ ಜಮೀನಿನಲ್ಲಿ ಸೇವಂತಿಗೆಯನ್ನು ಕಿತ್ತು ಹಾಕುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಅಂತಹದ್ದೇ ಮತ್ತೊಂದು ಘಟನೆ ತಾಲೂಕಿನ ಚೊಕ್ಕಂಡಹಳ್ಳಿಯಲ್ಲಿ ಶನಿವಾರ (ಸೆ.30) ನಡೆದಿದೆ.
ಚೊಕ್ಕಂಡಹಳ್ಳಿಯ ರೈತ ನಾಗೇಶ್ ತಮ್ಮ 5 ಎಕರೆ ಜಮೀನಿನಲ್ಲಿ ಬೆಳೆದ ಸೇವಂತಿ ಹೂವಿಗೆ ಬೇಡಿಕೆ ಹಾಗೂ ಬೆಲೆ ಸಿಗದ ಕಾರಣದಿಂದಾಗಿ ಮನನೊಂದು ಟ್ರ್ಯಾಕ್ಟರ್ ರೂಟರ್ ಹೊಡೆದು ನಾಶ ಮಾಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ಸೇವಂತಿ ಬೆಳೆದಿದ್ದರು.
ಹೂವು ಬಿಡಿಸಿ ವಾರುಕಟ್ಟೆಗೆ ಹಾಕಿದರೂ ಕೂಲಿಕಾರರಿಗೆ ಕೂಲಿ ಕೊಡಲೂ ಹಣ ಸಿಗುವುದಿಲ್ಲ ಎಂಬ ಸಂಗತಿ ಅರಿತ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ.