ಶಿವಮೊಗ್ಗ: ಕಲಾವಿದರಿಗೆ ನಿವೃತ್ತಿ ಎಂಬುದಿಲ್ಲ. ಪ್ರಾಮಾಣಿಕ ಕಲಾವಿದನನ್ನು ಕಲಾಭಿಮಾನಿಗಳು ನಿವೃತ್ತರಾಗಲು ಬಿಡುವುದಿಲ್ಲ ಎಂದು ಗಾಯಕ ಪುತ್ತೂರು ನರಸಿಂಹನಾಯಕ್ ಅಭಿಪ್ರಾಯಪಟ್ಟರು.
ಸಂಗೀತ್ ಸಮರ್ಪಣ್ ಟ್ರಸ್ಟ್ ಹಮ್ಮಿಕೊಂಡಿದ್ದ ಎರಡು ದಿನಗಳ ಧ್ವನಿ ಸಂಸ್ಕರಣೆ ಮತ್ತು ಸುಗಮ ಸಂಗೀತ ಕಲಿಕಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ನಾನು ಸಂಗೀತ ಕ್ಷೇತ್ರಕ್ಕೆ ಬಂದು 55 ವರ್ಷಗಳಾಗಿವೆ. ಆದರೂ ನನಗೆ ನಿವೃತ್ತಿ ಸಿಕ್ಕಿಲ್ಲ. ಸಂಗೀತದ ಆಸ್ವಾದನೆ ಅವರವರ ಮನೆ ಮತ್ತು ಮನಸ್ಸುಗಳಿಗೆ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಎಂದರು.
ಶಿವಮೊಗ್ಗ ಸಂಗೀತ ಮತ್ತು ಸಾಹಿತ್ಯದ ತವರೂರಾಗಿದೆ. ನನಗೆ ಗೊತ್ತಿರುವ ಸಂಗೀತದ ಎಲ್ಲಾ ವಿಷಯಗಳನ್ನು ಆಸಕ್ತರಿಗೆ ಕಲಿಸಲು ನಾನು ಬಂದಿದ್ದೇನೆ. ಈ ಶಿಬಿರದಲ್ಲಿ ಒಂದಿಷ್ಟು ಮಂದಿಗೆ ಲಾಭವಾದರೆ ಉದ್ದೇಶ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್, ಈ ಶಿಬಿರ ವಿಶೇಷವಾದದ್ದು. ದಿಗ್ಗಜ ಕಲಾವಿದರಿಂದ ಸಂಗೀತದ ಬಗೆಗಿನ ಎಲ್ಲ ವಿಷಯಗಳನ್ನು ತಿಳಿಯುವ ಒಂದು ಉತ್ತಮ ಅವಕಾಶ ಒದಗಿಬಂದಿದೆ ಎಂದರು.
ಸಂಗೀತ್ ಸಮರ್ಪಣ್ ಟ್ರಸ್ಟ್ ಅಧ್ಯಕ್ಷೆ ಮತ್ತು ಗಾಯಕಿ ಸುರೇಖಾ ಹೆಗಡೆ ಮಾತನಾಡಿದರು. ಮ್ಯಾಂಡೋಲಿನ್ ಕಲಾವಿದ ಎನ್.ಎಸ್.ಪ್ರಸಾದ್ ಉಪಸ್ಥಿತರಿದ್ದರು.