ರಜಿನಿಕಾಂತ್ ಅಭಿನಯದ 'ಪಡೆಯಪ್ಪ' ಚಿತ್ರದ ದೃಶ್ಯ
- ರಜಿನಿಕಾಂತ್ ಜನ್ಮದಿನಕ್ಕೆ ರೀ-ರಿಲೀಸ್ ಆದ 'ಪಡೆಯಪ್ಪ' ಚಿತ್ರ
- ತಮ್ಮ ನೆಚ್ಚಿನ ನಟನ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಶಿಳ್ಳೆ-ಚಪ್ಪಾಳೆಗಳು
- 75ನೇ ವಯಸ್ಸಿನಲ್ಲೂ ತಲೈವಾಗೆ ನಿಲ್ಲದ ಸ್ಟಾರ್ಡಮ್
ತಮಿಳುನಾಡು: ಡಿ.12ರಂದು ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜಿನಿಕಾಂತ್ ಅವರು 75ನೇ ವಸಂತಕ್ಕೆ ಕಾಲಿಟ್ಟರು. ತಮ್ಮ ನೆಚ್ಚಿನ ಹೀರೋ ಜನ್ಮದಿನವನ್ನು ಹಬ್ಬದಂತೆ ಸಂಭ್ರಮಿಸಿದ 'ತಲೈವಾ' ಅಭಿಮಾನಿಗಳು, ಅವರ ಹುಟ್ಟುಹಬ್ಬ ಪ್ರಯುಕ್ತ ರೀ-ರಿಲೀಸ್ ಆದ 'ಪಾದಯಪ್ಪ' ಚಿತ್ರಕ್ಕೆ ಶಿಳ್ಳೆ-ಚಪ್ಪಾಳೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.
ರಜಿನಿಕಾಂತ್ ಅವರ ಜನ್ಮದಿನದಂದೇ 1999ರಲ್ಲಿ ತೆರೆಕಂಡ ಸೂಪರ್ಹಿಟ್ 'ಪಾದಯಪ್ಪ' ಮಗದೊಮ್ಮೆ ಚಿತ್ರಮಂದಿರಗಳಲ್ಲಿ ರಾರಾಜಿಸಿದ್ದೇ ತಡ, ರಜಿನಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ವಿಶೇಷವಾಗಿ, ತಮಿಳುನಾಡಿನ ಥಿಯೇಟರ್ಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಚೆನ್ನೈನ ರೋಹಿಣಿ ಚಿತ್ರಮಂದಿರದಲ್ಲಿ ರಜಿನಿ ಅವರ ಎಂಟ್ರಿಗೆ ಚೀರಾಡಿರುವ ಅಭಿಮಾನಿಗಳ ಬಳಗ, ನಟನ 75ನೇ ಜನ್ಮದಿನಕ್ಕೆ ಶುಭಾಶಯಗಳನ್ನು ತಿಳಿಸಿದೆ. ಅದರಲ್ಲೂ, ಬೆಳ್ಳಿ ಪರದೆಯಲ್ಲಿ ರಜಿನಿಕಾಂತ್ ಅವರ ಓಪನಿಂಗ್ ದೃಶ್ಯವಂತು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಈ ಮಧ್ಯೆ, ಒಂದಷ್ಟು ಅಭಿಮಾನಿಗಳು ಒಟಿಟಿಯಲ್ಲೂ ಚಿತ್ರವನ್ನು 4ಕೆ ಫಾರ್ಮೆಟ್ನಡಿ ರಿಲೀಸ್ ಮಾಡುವಂತೆ ಚಿತ್ರತಂಡಕ್ಕೆ ಮನವಿ ಮಾಡಿದ್ದಾಗಿ ವರದಿಯಾಗಿದೆ.
1999ರಲ್ಲಿ ರಿಲೀಸ್ ಆದ 'ಪಾದಯಪ್ಪ' ಚಿತ್ರದಲ್ಲಿ, ಪವರ್ಫುಲ್ ಡೈಲಾಗ್, ಮರೆಯಲಾಗದ ಸೂಪರ್ ಸೀನ್ಸ್, ರಜಿನಿಕಾಂತ್ ಅವರ ಹೆಚ್ಚು ಅವಧಿ ಸ್ಕೀನ್ ಪ್ರಸೆನ್ಸ್ ಎಲ್ಲವೂ ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ನೀಡಿದೆ. ಕೆಎಸ್ ರವಿಕುಮಾರ್ ನಿರ್ದೇಶನದ ತಮಿಳು ಸಿನಿಮಾದಲ್ಲಿ ರಜಿನಿಕಾಂತ್, ನಟಿ ರಮ್ಯ ಕೃಷ್ಣ ಮತ್ತು ಸೌಂದರ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).