ಶಿವಮೊಗ್ಗದ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಮಂಗಳವಾರ ತಡರಾತ್ರಿ ಅಭಿಮಾನಿಗಳ ವಿಜಯೋತ್ಸವ. 
ನ್ಯೂಸ್

ಆರ್‌ಸಿಬಿ ಗೆಲುವಿಗೆ ಅಭಿಮಾನಿಗಳ ಹರ್ಷೋದ್ಗಾರ

ನವೀನ ಬಿ.ಎಂ

ಶಿವಮೊಗ್ಗ: ಆರ್‌ಸಿಬಿ ತಂಡ ಐಪಿಎಲ್ ಚಾಂಪಿಯನ್ ಆಗುತ್ತಿದ್ದಂತೆ ಶಿವಮೊಗ್ಗದಲ್ಲಿ ಮಂಗಳವಾರ ತಡರಾತ್ರಿವರೆಗೂ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ವಿವಿಧೆಡೆ ಯುವಕರು ರಸ್ತೆಗಿಳಿದು ಘೋಷಣೆ ಮೊಳಗಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಶಿವಮೊಗ್ಗದಲ್ಲಿ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಮತ್ತೊಂದೆಡೆ ಜಾಲಿ ರೈಡ್ ಮಾಡುವಾಗ ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮಂಗಳವಾರ ರಾತ್ರಿ ಐಪಿಎಲ್ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ರೋಚಕ ಗೆಲುವು ದಾಖಲಿಸಿದ ಬೆನ್ನಲ್ಲೇ ಸಹಸ್ರಾರು ಅಭಿಮಾನಿಗಳು ಶಿವಮೊಗ್ಗ ಜಿಲ್ಲಾದ್ಯಂತ ಕಣಿದು ಕುಪ್ಪಳಿಸಿದರು. ಪ್ರಮುಖ ವೃತ್ತಗಳಲ್ಲಿ ಜಮಾಯಿಸಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಏಕಾಏಕಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು.

ಐಪಿಎಲ್ ಫೈನಲ್ ಪಂದ್ಯಾವಳಿ ವೀಕ್ಷಣೆಗೆ ಶಿವಮೊಗ್ಗದ ವಿವಿಧೆಡೆ ಬೃಹತ್ ಪರದೆಗಳನ್ನು ಹಾಕಲಾಗಿತ್ತು. ಆರ್‌ಸಿಬಿ ಅಭಿಮಾನಿಗಳು ಈ ಪರದೆಗಳಲ್ಲಿ ಪಂದ್ಯಾವಳಿ ವೀಕ್ಷಿಸಿದರು. ಆರ್‌ಸಿಬಿ ತಂಡ ಫೋರ್, ಸಿಕ್ಸ್ ಬಾರಿಸಿದಾಗ, ಬೌಲರ್‌ಗಳು ವಿಕೆಟ್ ಪಡೆದಾಗ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ, ಕೇಕೆ ಹಾಕುವ ಮೂಲಕ ಸಂಭ್ರಮಿಸಿದರು. ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಕ್ಲಬ್‌ಗಳಲ್ಲಿ ಪಂದ್ಯಾವಳಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.