ಮುಂಬೈ: ಚಿತ್ರರಂಗ ಅಂದಮೇಲೆ ಹಾಗೆಯೇ. ಗೆಲುವು ಖಚಿತ, ಸೋಲು ನಿಶ್ಚಿತ. ಆರಂಭಿಕ ದಿನಗಳು ಬಹಳ ಕಷ್ಟಕರವಾಗಿರುತ್ತವೆ. ನಿರಂತರ ಶ್ರಮ, ಶ್ರದ್ಧೆ, ಕೆಲಸದ ತುಡಿತ, ವೃತ್ತಿಯ ಮೇಲಿನ ಅಪಾರ ಗೌರವ ಇದೆಲ್ಲದರ ಜತೆಗೆ ಒಂದಷ್ಟು ಅದೃಷ್ಟ ಕೈಹಿಡಿದರೆ ಖಂಡಿತ ಯಶಸ್ಸಿನ ಹಾದಿ ತಲುಪಬಹುದು. ಭಾರತೀಯ ಚಿತ್ರೋದ್ಯಮದಲ್ಲಿ ತಾನು ಸೂಪರ್ಸ್ಟಾರ್ ಆಗಬೇಕು, ಎಲ್ಲರೂ ಗುರುತಿಸುವಂತ ಪ್ರತಿಭೆಯಾಗಿ ಬೆಳೆಯಬೇಕು, ಜನಪ್ರಿಯತೆ ಗಳಿಸಬೇಕು ಎಂದು ಅಪಾರ ಕನಸ ಹೊತ್ತು ಬರುವ ಅದೆಷ್ಟೋ ಸಂಖ್ಯೆಯ ಪೈಕಿ ಕೆಲವೇ ಕೆಲವರು ಮಾತ್ರ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಆ ಸಾಲಿಗೆ ಇಲ್ಲೊಬ್ಬರು ವ್ಯಕ್ತಿ ಸೇರಿದ್ದು, ಅಂದಿನ ಕಾಲಕ್ಕೆ ಬಾಲಿವುಡ್ ಚಿತ್ರರಂಗಕ್ಕೆ ಅತ್ಯಂತ ದೊಡ್ಡ ಕೊಡುಗೆಯೊಂದನ್ನು ಕೊಟ್ಟು, ಒಂದು ಪಾಪ್ಯೂಲರ್ ಮ್ಯೂಸಿಕ್ ಸಂಸ್ಥೆಯನ್ನು ಸಹ ಕಟ್ಟಿಕೊಟ್ಟಿದ್ದಾರೆ. ಅದು ಇಂದಿಗೂ ಕೂಡ ಚಾಲ್ತಿಯಲ್ಲಿದೆ ಎಂಬುದು ಇಲ್ಲಿ ಗಮನಾರ್ಹ.
ಅಸಲಿಗೆ ಇಲ್ಲಿ ನಾವು ಹೇಳಲು ಹೊರಟಿರುವ ವ್ಯಕ್ತಿ ಒಬ್ಬ ಪ್ರಖ್ಯಾತ ನಟ ಅಲ್ಲ. ಬದಲಿಗೆ ಬಾಲಿವುಡ್ ಸಂಗೀತಕ್ಕೆ ಹೊಸ ರೂಪ, ದಿಕ್ಕು, ಮುನ್ನುಡಿ ಕೊಟ್ಟ ಮನುಷ್ಯ. ನೀವು ಹಿಂದಿ ಚಿತ್ರಗೀತೆಗಳನ್ನು ಹೆಚ್ಚಾಗಿ ಕೇಳುತ್ತೀರಿ ಅಂದ್ರೆ ಖಂಡಿತ ಇವರ ಹೆಸರು ನೆನಪಾಗಬಹುದು. 1983ರಲ್ಲಿ ಟಿ-ಸಿರೀಸ್ ಎಂಬ ಜನಪ್ರಿಯ ಮ್ಯೂಸಿಕ್ ಸಂಸ್ಥೆ ಹುಟ್ಟುಹಾಕಿದ ಇವರು, ಮೊದಲಿಗೆ ಇದನ್ನು ಸೂಪರ್ ಕ್ಯಾಸೆಟ್ಸ್ ಇಂಡಸ್ಟ್ರೀಸ್ ಎಂದು ಶುರುಮಾಡಿದರು. ಅದಾದ ನಂತರ 90ರ ದಶಕದಲ್ಲಿ ಟಿ-ಸಿರೀಸ್ ಎಂದು ನಾಮಕರಣ ಮಾಡಲಾಯಿತು.
ಇಂದು ಈ ಸಂಸ್ಥೆ ಬಾಲಿವುಡ್ನ ಟಾಪ್ ಮ್ಯೂಸಿಕ್ ಕಂಪೆನಿಗಳಲ್ಲಿ ಒಂದು. ಇಂತಹ ಬ್ರ್ಯಾಂಡ್ ಕಂಪೆನಿಯನ್ನು ಹುಟ್ಟುಹಾಕಿದ ವ್ಯಕ್ತಿ ಬೇರಾರೂ ಅಲ್ಲ ಅವರೇ ಗುಲ್ಶನ್ ಕುಮಾರ್. ಈ ಬೃಹತ್ ಮ್ಯೂಸಿಕ್ ಸಂಸ್ಥೆ ಮತ್ತು ಫಿಲ್ಮ್ ಸ್ಟುಡಿಯೋ ಹಿಂದಿರುವ ಶಕ್ತಿಯೇ ಗುಲ್ಶನ್ ಅವರು. ಬಾಲಿವುಡ್ ಸಂಗೀತ ಉದ್ಯಮವನ್ನು ಕ್ರಾಂತಿಗೊಳಿಸಿದ ಇವರು, ಭಾರತದಲ್ಲಿ ಆಡಿಯೋ ಕ್ಯಾಸೆಟ್ ಸ್ವರೂಪವನ್ನು ವಿನೂತನವಾಗಿ ಪರಿಚಯಿಸಿದರು.
ಇದನ್ನೂ ಓದಿ: ಭತ್ತದ ಗದ್ದೆಗೆ ಕಾಲುವೆ ನೀರು ಹರಿದು ನಷ್ಟ
ಸ್ಥಾಪನೆಗೊಂಡ ಕೆಲವೇ ಕೆಲವು ವರ್ಷಗಳಲ್ಲಿ ಟಿ-ಸಿರೀಸ್ ದೀರ್ಘಕಾಲದಿಂದ ಖ್ಯಾತಿ ಪಡೆದಿದ್ದ ಹೆಚ್ಎಂವಿ ಲೇಬಲ್ ಅನ್ನು ಹಿಂದಿಕ್ಕಿ, ಅಗ್ರಸ್ಥಾನಕ್ಕೆ ಜಿಗಿಯಿತು. 1951ರಲ್ಲಿ ಪಂಜಾಬಿ-ಹಿಂದೂ ಕುಟುಂಬದಲ್ಲಿ ಜನಿಸಿದ ಗುಲ್ಶನ್ ಜೀ, ಒಬ್ಬ ಬಡ ಹಣ್ಣು ವ್ಯಾಪಾರಿಯ ಪುತ್ರನಾಗಿ ಜನ್ಮ ಪಡೆದರು. ದೆಹಲಿಯ ದರಿಯಾಗಂಜ್ನಲ್ಲಿ ವಾಸವಿದ್ದ ಅವರ ಕುಟುಂಬ, 1947ರ ವಿಭಜನೆಯ ಸಮಯದಲ್ಲಿ ಹಿಂದೂ ವಿರೋಧಿ ಗಲಭೆಗಳಿಂದಾಗಿ ಪಶ್ಚಿಮ ಪಂಜಾಬ್‌ನ ಜಾಂಗ್ ಪ್ರದೇಶಕ್ಕೆ ಪಲಾಯನ ಮಾಡಿದರು.
ಇತರೆ ಕಂಪೆನಿಗೆ ಹೋಲಿಸಿದರೆ ಅತೀ ಕಡಿಮೆ ವೆಚ್ಚದಲ್ಲಿ ಜನಪ್ರಿಯ ಹಾಡುಗಳ ಕವರ್ ಸಾಂಗ್ಸ್ಗಳನ್ನು ರೆಕಾರ್ಡ್ ಮಾಡುತ್ತಿದ್ದ ಗುಲ್ಶನ್ ಅವರು, ಅನುರಾಧಾ ಪೌಡ್ವಾಲ್, ಮೊಹಮ್ಮದ್ ಅಜೀಜ್, ಕುಮಾರ್ ಸಾನು ಮತ್ತು ಅಲ್ಕಾ ಯಾಗ್ನಿಕ್ ಅವರಂತಹ ಗಾಯಕರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡರು. ಕ್ಯಾಸೆಟ್ ಸಂಸ್ಥೆಗಳ ಪೈಕಿ ಭಾರತದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಅವರು ಆ.12, 1997ರಂದು ಶಿವನಿಗೆ ಸಮರ್ಪಿತವಾದ ಹಿಂದೂ ದೇವಾಲಯ ಜಿತೇಶ್ವರ್ ಮಹಾದೇವ ಮಂದಿರಕ್ಕೆ ಭೇಟಿ ನೀಡಿದ್ದಾಗ ದುಷ್ಕರ್ಮಿಗಳ ಗ್ಯಾಂಗ್ನ ಗುಂಡಿನ ದಾಳಿಗೆ ಸಿಲುಕಿ ಮೃತಪಟ್ಟರು.
ಕುಮಾರ್ ದೇಹಕ್ಕೆ ಒಕ್ಕಿದ್ದು ಬರೋಬ್ಬರಿ 16 ಗುಂಡು. ಇಂದು ಅವರ ನೆನಪಿನಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಟಿ-ಸಿರೀಸ್ ಮ್ಯೂಸಿಕ್ ಕಂಪೆನಿ ಬಾಲಿವುಡ್ನ ಸ್ಟಾರ್ ನಟರ ಚಿತ್ರಗಳ ಗೀತೆಗಳನ್ನು ತಮ್ಮ ಬ್ಯಾನರ್ನಡಿ ರಿಲೀಸ್ ಮಾಡಿಕೊಡುತ್ತಿದೆ,(ಏಜೆನ್ಸೀಸ್).