ನ್ಯೂಸ್

ಕೌಟುಂಬಿಕ ಕಲಹ; ಬೆಂಗಳೂರಿನಲ್ಲಿ ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ| Bengaluru

Bengaluru: ಕೌಟುಂಬಿಕ ಕಲಹದಿಂದ ಬೇಸತ್ತ 27 ವರ್ಷದ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದು ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ(ಅ. 09) ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಬಾಗಲಗುಂಟೆ ಪ್ರದೇಶದ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಕೋಣೆಯಲ್ಲಿ ನೆಲದ ಮೇಲೆ ಇಬ್ಬರ ಮಕ್ಕಳ ಮೃತದೇಹವಿದ್ದು, ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ ವಿಜಯಲಕ್ಷ್ಮಿ ಎಂದು ಆಕೆಯ ಒಂದು ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳು ಮೃತರು.

ರಾಯಚೂರು ಮೂಲದ ಕುಟುಂಬದವರಾಗಿದ್ದು, ಪತಿ ನಗರದ ಮಾಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಪತಿಯೊಂದಿಗೆ ಇದ್ದ ಜಗಳವೇ ಆಕೆ ಈ ಭೀಕರ ಕೃತ್ಯ ಎಸಗಲು ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಳ್ಳುವ ಮೊದಲು ತನ್ನ ಮಕ್ಕಳನ್ನು ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದಾಗ್ಯೂ ಘಟನಾ ಸ್ಥಳದಲ್ಲು ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)