ಮೈಸೂರು: ಕುವೆಂಪು ಅವರ ಬಾಳಿ ಬದುಕಿದ್ದ ಮೈಸೂರಿನ ಮನೆಯನ್ನು ಕುಪ್ಪಳಿಯ ಮಾದರಿಯಲ್ಲಿ ವಸ್ತುಸಂಗ್ರಹಾಲಯ ಮಾಡಲು ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಕುವೆಂಪು ಅವರ ಮಗಳು ತಾರಿಣಿ ಹಾಗೂ ಅಳಿಯ ಡಾ. ಚಿದಾನಂದಗೌಡ ತಿಳಿಸಿದ್ದಾರೆ.
ಮೇರು ಸಾಹಿತಿ ಕುವೆಂಪು ಅವರಿದ್ದ ಮನೆ ಎಂದು ಸಾಕಷ್ಟು ಜನ ಬರುತ್ತಿದ್ದಾರೆ. ಹಾಗಾಗಿ ಈ ಮನೆಯನ್ನು ವಸ್ತುಸಂಗ್ರಹಾಲಯ ಮಾಡಬೇಕು ಎಂದು ಸರ್ಕಾರ ಬಯಸಿತ್ತು. ಕೆಲ ಅಧಿಕಾರಿಗಳು ಬಂದು ನಮ್ಮೊಂದಿಗೆ ಚರ್ಚಿಸಿದ್ದರು. ಆದರೆ ಲಾಕ್‌ಡೌನ್‌ನಿಂದಾಗಿ ಆ ಪ್ರಸ್ತಾಪ ಅಲ್ಲಿಗೆ ನಿಂತಿದೆ ಎಂದು ಹೇಳಿದರು.
ಕುವೆಂಪು ಅವರ ಮನೆಯನ್ನು ಗೂಗಲ್‌ನಲ್ಲಿ ಅಳವಡಿಸಿರುವುದು ಉತ್ತಮ ಕಾರ್ಯವಾಗಿದೆ. ಎಷ್ಟೋ ಜನರು ಕುವೆಂಪುನಗರಕ್ಕೆ ಹೋಗಿ ಕುವೆಂಪು ಮನೆ ಎಲ್ಲಿ ಎಂದು ಹುಡುಕಾಟ ನಡೆಸಿದ ಪ್ರಸಂಗವೂ ಇದೆ. ಈಗ ಗೂಗಲ್‌ನಲ್ಲಿ ಮನೆ ಹುಡುಕಲು ನೆರವಾಗುವ ಕಾರ್ಯ ಮಾಡಿರುವ ಯುವ ಬ್ರಿಗೇಡ್ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಕುಪ್ಪಳಿಯಂತೆ ಇಲ್ಲಿಯೂ ಸಮಿತಿಯೊಂದನ್ನು ರಚಿಸಿ ಅದರಲ್ಲಿ ಕುವೆಂಪು ಕುಟುಂಬದ ಇಬ್ಬರು ಸದಸ್ಯರು ಯಾವಾಗಲೂ ಇರುವಂತೆ ನೋಡಿಕೊಳ್ಳಬೇಕು ಎನ್ನುವ ಬೇಡಿಕೆ ಇಡಲಾಗಿದೆ ಎಂದು ಹೇಳಿದರು.