ನ್ಯೂಸ್

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Mangaluru - Nishantha Narayana

ಪುತ್ತೂರು: ಯುವತಿಗೆ ಮದುವೆ ಭರವಸೆ ನೀಡಿ ವಂಚಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಶ್ರೀಕೃಷ್ಣ ಜೆ. ರಾವ್ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯನ್ನು ಮಂಗಳೂರು ೬ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜುಲೈ ೧೯ಕ್ಕೆ ಮುಂದೂಡಿದೆ.

ಪ್ರಕರಣ ನ್ಯಾಯಪೀಠದ ಮುಂದೆ ವಿಚಾರಣೆಗೆ ಶುಕ್ರವಾರ ಬಂದಾಗ, ಸಂತ್ರಸ್ತೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ಆರೋಪಿಗೆ ಜಾಮೀನು ನೀಡದಂತೆ ಮನವಿ ಮಾಡಿದರು. ಬಳಿಕ ಸರ್ಕಾರಿ ಅಭಿಯೋಜಕರು(ಪಿಪಿ) ಹಾಜರಾಗಿ, ತನಿಖಾಧಿಕಾರಿಯ(ಐಒ) ವರದಿಯೊಂದಿಗೆ ಜಾಮೀನು ಅರ್ಜಿಗೆ ಪ್ರಬಲ ಆಕ್ಷೇಪಣೆ ಸಲ್ಲಿಸಿದರು. ಈ ವೇಳೆ, ಅರ್ಜಿದಾರರ ಪರ ವಕೀಲರು, ಸರ್ಕಾರದ ಆಕ್ಷೇಪಣೆಗೆ ಪ್ರತಿಯಾಗಿ ವಾದ ಮಂಡಿಸಲು ಕಾಲಾವಕಾಶ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ವಕೀಲರ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ವಾದ-ಪ್ರತಿವಾದಕ್ಕಾಗಿ ಪ್ರಕರಣದ ವಿಚಾರಣೆಯನ್ನು ಜುಲೈ ೧೯ಕ್ಕೆ ನಿಗದಿಪಡಿಸಿದೆ.