ನ್ಯೂಸ್

ರಾಜ್ಯದಲ್ಲಿ ಜನನ ಕುಸಿತ, ಏರಿದ ಮರಣ ಪ್ರಮಾಣ; ಅಂಕಿ-ಅಂಶಗಳಿಂದ ಬಹಿರಂಗ

ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ರಾಜ್ಯದಲ್ಲಿ ಜನನ ಪ್ರಮಾಣ ಕಡಿಮೆಯಾಗಿದ್ದು, ಮರಣ ಪ್ರಮಾಣ ಹೆಚ್ಚಾಗುತ್ತಿದೆ! ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಿದ್ಧಪಡಿಸಿದ 2024-25ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಇಂತಹದ್ದೊಂದು ಅಚ್ಚರಿ ಅಂಶ ಕಂಡುಬಂದಿದೆ.

ಸರ್ಕಾರದ ಲೆಕ್ಕದ ಪ್ರಕಾರ 2023ರಲ್ಲಿ 10.17 ಲಕ್ಷ ಜನನ ಹಾಗೂ 5.39 ಲಕ್ಷ ಮರಣ ನೋಂದಣಿಯಾಗಿದೆ. 2024ರಲ್ಲಿ 9.91 ಲಕ್ಷ ಜನನಗಳು ಮತ್ತು 5.52 ಲಕ್ಷ ಮರಣಗಳು ನೋಂದಣಿಯಾಗಿವೆ. ಅಂದರೆ ಕಳೆದ ಒಂದು ವರ್ಷದಲ್ಲಿ ಜನನ ಸಂಖ್ಯೆ ಕಡಿಮೆಯಾಗಿದ್ದು, ಮರಣ ಸಂಖ್ಯೆ ಹೆಚ್ಚಾದಂತಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಶೇ.100ರಷ್ಟು ನೋಂದಣಿಯನ್ನು ಖಾತ್ರಿಪಡಿಸಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ- ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯದಲ್ಲಿ್ಲ 61,903 ಘಟಕಗಳಲ್ಲಿ (61,250 ಗ್ರಾಮೀಣ ಮತ್ತು 653 ನಗರ ಕೇಂದ್ರಗಳಲ್ಲಿ) ಜನನ ಮತ್ತು ಮರಣ ನೋಂದಣಿಯನ್ನು ಮಾಡಲಾಗುತ್ತಿದೆ. ಭಾರತ ಸರ್ಕಾರದ ಜನನ ಮರಣ ನೋಂದಣಿ ತಿದ್ದುಪಡಿ ಕಾಯ್ದೆ 2023ಕ್ಕೆ ಅನುಗುಣವಾಗಿ ಕರ್ನಾಟಕ ರಾಜ್ಯವು ಜನನ ಮರಣ ನಿಯಮಗಳು 1999ನ್ನು 2024ರ ಡಿ.31ರ ಅಧಿ ಸೂಚನೆಯಲ್ಲಿ ನವೀಕರಿಸಿದೆ. ಜನನ ಕಡಿಮೆಯಾಗಿ, ಮರಣ ಹೆಚ್ಚಾಗಲು ಕಾರಣ ಏನು ಎಂಬುದಕ್ಕೆ ಸರ್ಕಾರದ ಹಿರಿಯ ಅಧಿಕಾರಿಗಳಲ್ಲಿ ಯಾವುದೇ ಮಾಹಿತಿ ಇಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಯಂದಿರ ಮರಣ ನಿಯಂತ್ರಣ: ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ರಾಜ್ಯದ ಸಂಘಟಿತ ಪ್ರಯತ್ನಗಳು ಅತ್ಯುತ್ತಮ ಫಲಿತಾಂಶಗಳನ್ನು ನೀಡಿವೆ ಎಂದು ಸರ್ಕಾರ ಹೇಳಿಕೊಂಡಿದೆ. 2015-17ರಲ್ಲಿ 97 (ಪ್ರತಿ 1 ಲಕ್ಷ ಜೀವಂತ ಜನನಗಳಿಗೆ) ಇದ್ದ ತಾಯಂದಿರ ಮರಣ ಪ್ರಮಾಣವು 2018-20ರಲ್ಲಿ 69ಕ್ಕೆ ಇಳಿಕೆಯಾಗಿದೆ. ಶಿಶು ಮರಣ ಪ್ರಮಾಣವು 2015ರಲ್ಲಿ 28 ಇದ್ದು 2020ರಲ್ಲಿ 19ಕ್ಕೆ ಸ್ಥಿರವಾದ ಇಳಿಕೆ ಕಂಡಿದೆ.

ರಾಜ್ಯದ ಜನ ಸಂಖ್ಯೆ ಎಷ್ಟು?: ರಿಪೋರ್ಟ್ ಆಫ್ ದಿ ಟೆಕ್ನಿಕಲ್ ಗ್ರೂಪ್ ಆನ್ ಪಾಪ್ಯುಲೇಷನ್ ಪ್ರೊಜೆಕ್ಷನ್ ಪ್ರಕಾರ ರಾಜ್ಯದಲ್ಲಿ ಯೋಜಿತ ಒಟ್ಟು ಜನ ಸಂಖ್ಯೆ 2024ಕ್ಕೆ 6,81,15,000 ಇರಲಿದೆ. ಪುರುಷರ ಯೋಜಿತ ಜನ ಸಂಖ್ಯೆ 3,45,24,652 ಹಾಗೂ ಮಹಿಳಾ ಯೋಜಿತ ಜನಸಂಖ್ಯೆ 3,35,90,348 ಇದೆ.

ಮಕ್ಕಳ ಮರಣ ಕುಸಿತ: ಮಕ್ಕಳ ಮರಣ ತಡೆಯಲು ಹತ್ತಾರು ಕಾರ್ಯಕ್ರಮ ಹಾಗೂ ಜಾಗೃತಿಗೆ ಮಹತ್ವ ನೀಡುತ್ತಾ ಬಂದಿದೆ. ಶಿಶು ಮರಣ ಪ್ರಮಾಣವು 2011ರಲ್ಲಿ ಪ್ರತೀ ಲಕ್ಷಕ್ಕೆ 35ರಷ್ಟು ಇದ್ದು, 2020ರಲ್ಲಿ 19ಕ್ಕೆ ಇಳಿದಿದೆ. 5 ವರ್ಷ ದೊಳಗಿನ ಮಕ್ಕಳ ಮರಣ ಪ್ರಮಾಣ ವು 40ರಿಂದ 21ಕ್ಕೆ ಕಡಿಮೆ ಯಾಗಿದೆ. ನವಜಾತ ಶಿಶು ಮರಣ ಪ್ರಮಾಣವು 24ರಿಂದ 11ಕ್ಕೆ ಇಳಿಕೆ ಕಂಡಿದ್ದು, ಆರಂಭಿಕ ನವಜಾತ ಶಿಶು ಮರಣ ಪ್ರಮಾಣವು 20ರಿಂದ 11ಕ್ಕೆ ಇಳಿಕೆಯಾಗಿದೆ.