ನ್ಯೂಸ್

ಪಶ್ಚಿಮಘಟ್ಟದಲ್ಲಿ 2 ಸೇನಾ ಕಾಪ್ಟರ್​ಗಳ ಪತನ ಇನ್ನೂ ನಿಗೂಢ; 1998, 2003ರಲ್ಲಿ ಪ್ರತ್ಯೇಕ ಅಪಘಾತ

|ಶಿವಾನಂದ ತಗಡೂರು,

ಬೆಂಗಳೂರು: ತಮಿಳುನಾಡಿನ ಕನೂರಿನ ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಸೇನಾ ಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಸೇರಿದಂತೆ ಹದಿನಾಲ್ಕು ಜನರು ಮೃತಪಟ್ಟಿರುವ ದುರ್ಘಟನೆಯ ಬೆನ್ನಲ್ಲಿಯೇ ರಾಜ್ಯದಲ್ಲಿಯೇ ನಡೆದ ಸೇನೆಯ 2 ಹೆಲಿಕಾಪ್ಟರ್​ಗಳ ಪತನದ ಘಟನೆಗಳು ಮುನ್ನೆಲೆಗೆ ಬಂದಿವೆ. ಎರಡು ದಶಕಗಳ ಹಿಂದೆ ಪಶ್ಚಿಮಘಟ್ಟದ ಸೆರಗಿನ ಅರಮನೆ ಬೆಟ್ಟದ ದಟ್ಟ ಕಾಡಿನಲ್ಲಿ ನಡೆದ 2 ಸೇನಾ ಹೆಲಿಕಾಪ್ಟರ್​ಗಳ ಅಪಘಾತದಲ್ಲಿ ಒಟ್ಟು 6 ಜನ ಯೋಧರು ಮೃತಪಟ್ಟಿದ್ದರು.

ಮೊದಲ ಹೆಲಿಕಾಪ್ಟರ್: 1998ರಲ್ಲಿ ಸೇನಾ ಹೆಲಿಕಾಪ್ಟರ್​ನಲ್ಲಿ ಮೂವರು ಯೋಧರು ಬೆಂಗಳೂರಿನಿಂದ ಸಕಲೇಶಪುರ ಭಾಗದ ಪಶ್ಚಿಮಘಟ್ಟವನ್ನು ದಾಟಿ ಮಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದರು. ಆಗ ಅರಮನೆ ಗುಡ್ಡದಲ್ಲಿ ಹೆಲಿಕಾಪ್ಟರ್ ನಿಗೂಢವಾಗಿ ನಾಪತ್ತೆಯಾಗಿತ್ತು. ದಟ್ಟ ಕಾಡಿನ ನಡುವೆ ಮಳೆ ಮತ್ತು ಪ್ರತಿಕೂಲದ ಹವಾಮಾನದಿಂದಾಗಿ ಆ ಹೆಲಿಕಾಪ್ಟರ್ ಪತ್ತೆಯಾಗಿರಲಿಲ್ಲ. ಬಳಿಕ ಸತತವಾಗಿ ಸೇನಾ ಕಾರ್ಯಾಚರಣೆ ಮತ್ತು ಸ್ಥಳೀಯರ ಸಹಕಾರದಿಂದ ಪತನಗೊಂಡ ಹೆಲಿಕಾಪ್ಟರ್​ನ್ನು 15 ದಿನಗಳ ನಂತರ ಪತ್ತೆ ಮಾಡಲಾಗಿತ್ತು. ದೂರ ದೂರಕ್ಕೆ ಬಿದ್ದಿದ್ದ ಮೂರು ಶವಗಳನ್ನು ಪತ್ತೆ ಮಾಡಿ ಸೇನೆಗೆ ಒಪ್ಪಿಸಲಾಗಿತ್ತು.

ಎರಡನೇ ಹೆಲಿಕಾಪ್ಟರ್: 2003ರಲ್ಲಿ ನಡೆದ ಘಟನೆ ಇದು. ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಮೂವರು ಯೋಧರಿದ್ದ ಸೇನಾ ಹೆಲಿಕಾಪ್ಟರ್ ಮತ್ತದೇ ಅರಮನೆ ಗುಡ್ಡದ ದಟ್ಟ ಅರಣ್ಯದಲ್ಲಿ ನಿಗೂಢವಾಗಿ ನಾಪತ್ತೆಯಾಗಿತ್ತು. ಸೇನೆ ಪಶ್ಚಿಮಘಟ್ಟದಲ್ಲಿ ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದರೂ, ಹೆಲಿಕಾಪ್ಟರ್ ಸುಳಿವು ಪತ್ತೆಯಾಗಿರಲಿಲ್ಲ.

ವರ್ಷಗಳ ಬಳಿಕ ಪತ್ತೆ: ಎರಡು ವರ್ಷಗಳ ಬಳಿಕ ದನಗಾಹಿಗಳಿಗೆ ಕಾಡಿನಲ್ಲೊಂದು ಬ್ಲ್ಯಾಕ್​ಬಾಕ್ಸ್ ಸಿಕ್ಕಿತ್ತು. ಅದರಲ್ಲಿ ಹಣವಿರಬಹುದು ಎಂದು ಭಾವಿಸಿ, ಅದನ್ನು ಕಲ್ಲಿನಲ್ಲಿ ಒಡೆದು ಏನೂ ಇಲ್ಲ ಎನ್ನುವುದು ಖಚಿತವಾದ ಮೇಲೆ ಹಿಂತಿರುಗಿದ್ದರು. ಈ ವಿಷಯ ಆ ಭಾಗದ ಮುಖಂಡ ಎಚ್.ಎಂ.ವಿಶ್ವನಾಥ್ ಕಿವಿಗೆ ಬಿದ್ದಿತ್ತು. ಅವರ ಸಹೋದರ ವಿಕ್ರಂ ಇದು ಹೆಲಿಕಾಪ್ಟರ್ ಬ್ಲ್ಯಾಕ್​ಬಾಕ್ಸ್ ಇರಬಹುದು ಎನ್ನುವ ಅನುಮಾನದಿಂದ ಅದೇ ದನಗಾಹಿಗಳ ಜೊತೆಗೆ ಆ ಸ್ಥಳಕ್ಕೆ ಹೋಗಿ ಸುತ್ತಲೂ ಹುಡುಕಾಟ ನಡೆಸಿದಾಗ ಅಲ್ಲಿ ಹೆಲಿಕಾಪ್ಟರ್ ಪಳೆಯುಳಿಕೆಗಳು ಸಿಕ್ಕಿದ್ದವು. ಅಲ್ಲದೆ ಎರಡು ಮೃತದೇಹಗಳ ಅಸ್ಥಿಪಂಜರವೂ ಸಿಕ್ಕಿತ್ತು.

ನಗದು ಬಹುಮಾನ: ನಾಪತ್ತೆಯಾದ ಸೇನಾ ಹೆಲಿಕಾಪ್ಟರ್ ಹುಡುಕಿಕೊಟ್ಟರೆ, ಅದರ ಸುಳಿವು ನೀಡಿದರೆ ಬಹುಮಾನ ನೀಡುವುದಾಗಿ ಸೇನೆ ಘೋಷಣೆ ಮಾಡಿತ್ತು. ಆ ಪ್ರಕಾರ ದನಗಾಹಿಗಳಿಗೆ ಸೇನೆ ನಗದು ಪರಿಹಾರವನ್ನು ನೀಡಿದ್ದು ಇತಿಹಾಸ.

ಟ್ರಕ್ಕಿಂಗ್ ಹೋದವರು ನಾಪತ್ತೆ: ಅದೇ ಅರಮನೆ ಗುಡ್ಡದ ಕಾಡಿನಲ್ಲಿ ಬೆಂಗಳೂರಿನ ಮೂವರು ಯುವಕರು 2006ರಲ್ಲಿ ಟ್ರಕ್ಕಿಂಗ್ ಹೋಗಿ, ನಿಗೂಢವಾಗಿ ನಾಪತ್ತೆಯಾಗಿದ್ದರು. ಶಿರಾಡಿಯ ಚೌಡೇಶ್ವರಿ ದೇಗುಲದ ಬಳಿ ಕಾರು ನಿಲ್ಲಿಸಿ ಹೋಗಿದ್ದವರು ಹಿಂತಿರುಗಿ ಬರಲೇ ಇಲ್ಲ. ಸತತ ಶೋಧ ಕಾರ್ಯಾಚರಣೆ ಮಾಡಿದರೂ, ಅವರು ಪತ್ತೆಯಾಗಲಿಲ್ಲ. ಕೆಲ ತಿಂಗಳ ಬಳಿಕ ಅವರ ಶವಗಳು ಪತ್ತೆಯಾಗಿದ್ದು ಕೂಡ ಅರಮನೆ ಗುಡ್ಡದ ದಟ್ಟ ಅರಣ್ಯದಲ್ಲಿಯೇ.

ಅರಮನೆ ಗುಡ್ಡದ ಕಾಡಿನಲ್ಲಿ ಒಂದು ಕಿಮೀ ವ್ಯಾಪ್ತಿಯ ಸುತ್ತಳತೆ ಬರ್ಮಡಾ ಟ್ರಯಂಗಲ್ ರೀತಿ ಭಾಸವಾಗುತ್ತದೆ. ಅಲ್ಲಿ ಗುರುತ್ವಾಕರ್ಷಣೆ ಶಕ್ತಿ ಕಡಿಮೆ ಇದೆ. ಆ ಕಾರಣಕ್ಕಾಗಿಯೇ ಅಲ್ಲಿ ನಾವು ತೆಗೆದುಕೊಂಡು ಹೋಗುವ ಯಾವುದೇ ಹೈಟೆಕ್ ಡಿವೈಸ್​ಗಳು ವರ್ಕ್ ಆಗುವುದಿಲ್ಲ. ಇದೇ ಕಾರಣಕ್ಕೆ ಇಲ್ಲಿ ಸೇನಾ ಹೆಲಿಕಾಪ್ಟರ್​ಗಳ ಅಪಘಾತವಾಗಿರಬಹುದು.

| ವಿಕ್ರಮ್ ಪರಿಸರ ಪ್ರೇಮಿ ಮತ್ತು ಟ್ರಕ್ಕಿಂಗ್ ಎಕ್ಸ್​ಪರ್ಟ್, ಹುರುಡಿ (ಸಕಲೇಶಪುರ ತಾಲೂಕು)