ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಬಂಧಿತರಿಗೆ ಷರತ್ತುಬದ್ಧ ಜಾಮೀನು ಲಭ್ಯವಾಗಾದ ಕೋರ್ಟ್‌ಗೆ ನಕಲಿ ಶ್ಯೂರಿಟಿ ಕೊಡಲು ಸಿದ್ಧವಾಗಿದ್ದ ಐವರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
ಕೋನಪ್ಪನ ಅಗ್ರಹಾರದ ದಾದಾ ಹಯಾತ್ ಖಲಂದರ್ (43), ಕನಕಪುರ ರಸ್ತೆ ಕೆರೆಚೂಡಹಳ್ಳಿಯ ಸ್ವರೂಪ್ (40), ಯಲಹಂಕದ ಚಂದ್ರಶೇಖರ್ (29), ಹಲಸೂರಿನ ಕುಮಾರ ವೇಲು (46) ಮತ್ತು ಹಾಸನ ಜಿಲ್ಲೆ ಹೆರಗು ಗ್ರಾಮದ ಸಂತೋಷ ಕುಮಾರ್ (36) ಬಂಧಿತರು. ಆರೋಪಿಗಳಿಂದ ನಕಲಿ ಆಧಾರ್ ಮತ್ತು ಪಹಣಿ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 29ರಂದು ಖಚಿತ ಮಾಹಿತಿ ಮೇರೆಗೆ ಸಬ್‌ಇನ್‌ಸ್ಪೆಕ್ಟರ್ ಎಚ್.ಜೆ. ಮಹದೇವ್ ನೇತೃತ್ವದ ತಂಡ, ನೃಪತುಂತ ರಸ್ತೆ ಸಿಎಂಎಂ ನ್ಯಾಯಾಲಯದ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ನಿಂತಿದ್ದ ಅಪರಿಚಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಕವರ್‌ನಲ್ಲಿ ಆಧಾರ್ ಕಾರ್ಡ್ ಮತ್ತು ಪಹಣಿ ಪತ್ತೆಯಾಗಿವೆ. ಯಾವ ಕಾರಣಕ್ಕೆ ಬಂದಿರುವುದಾಗಿ ಪ್ರಶ್ನಿಸಿದಾಗ ಅಪರಾಧ ಪ್ರಕರಣಗಳಲ್ಲಿ ಬಂಧಿತ ಆರೋಪಿಗಳಿಗೆ ಜಾಮೀನು ಸಿಕ್ಕಾಗ ಅವರ ಪರವಾಗಿ ಕೋರ್ಟ್‌ಗೆ ಶ್ಯೂರಿಟಿ ಸಲ್ಲಿಸಲು ಬಂದಿರುವುದಾಗಿ ಬಾಯ್ಬಿಟ್ಟಿದ್ದಾರೆ.
ಅಲ್ಲದೆ, ಬೇರೆಯವರ ಆಧಾರ್, ಭೂಮಿಯ ಪಹಣಿ ಮತ್ತು ಇತರ ದಾಖಲೆಗಳನ್ನು ಎಡಿಟ್ ಮಾಡಿ ಕೋರ್ಟ್‌ಗೆ ಅಸಲಿ ದಾಖಲೆಗಳು ಎಂದು ಸಲ್ಲಿಸುತ್ತಿದ್ದರು. ಇದರಿಂದ ಕೋರ್ಟ್ ವಿಚಾರಣೆಗೆ ದಾರಿ ತಪ್ಪಿಸುವುದರ ಜತೆಗೆ ಕಾನೂನು ಉಲ್ಲಂಸುತ್ತಿರುವುದು ಕಂಡು ಬಂದಿದೆ. ಈ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ. ಈ ಹಿಂದೆ ಎಷ್ಟು ಕೇಸ್‌ಗಳಲ್ಲಿ ನಕಲಿ ದಾಖಲೆ ಸಲ್ಲಿಸಿ ಯಾವ ಯಾವ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ಕೊಡಿಸಿದ್ದಾರೆ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.