ನ್ಯೂಸ್

ನನ್ನ- ಸಿಎಂ ನಡುವೆ ಒಡಕು ಮೂಡಿಸಲು ಈ ಸುಳ್ಳು ಸುದ್ದಿ; ಡಿಕೆಶಿ ರಾಂಗ್

ನವದೆಹಲಿ: ಜಾತಿ ಗಣತಿ ವರದಿ ಒಪ್ಪಿಕೊಳ್ಳಬೇಕೇ ಬೇಡವೇ ಎಂಬ ಚರ್ಚೆ ಜೋರಾಗಿದೆ. ಇತ್ತೀಚೆಗೆ ರಾಜ್ಯ ಒಕ್ಕಲಿಗರ ಸಂಘ ಸಭೆ ನಡೆಸಿ, ಸಿಎಂ ಹಾಗೂ ಡಿಸಿಎಂಗೆ ಪತ್ರ ಬರೆದು ಅವೈಜ್ಞಾನಿಕವಾಗಿರುವ ಜಾತಿ ಗಣತಿ ವರದಿ ಅಂಗೀಕರಿಸಬಾರದು ಎಂದು ಆಗ್ರಹಿಸಿತ್ತು.

ಈ ಬೆಳವಣಿಗೆ ಬೆನ್ನಲ್ಲೇ ಡಿಸಿಎಂ ಸಂಪುಟ ಸಹೋದ್ಯೋಗಿಗಳಿಗೆ ಪತ್ರ ಬರೆದು,‌ ವರದಿ ಕುರಿತು ತಮ್ಮ ಆಕ್ಷೇಪಣೆ ದಾಖಲಿಸಿದ್ದಾರೆಂಬ ಊಹಾಪೋಹ ಹರಿದಾಡಿತ್ತು. ಇದರ ಬಗ್ಗೆ ಪರ ವಿರೋಧ ಚರ್ಚೆ ಕೂಡ ಆರಂಭವಾಗಿದೆ.

ದೆಹಲಿಯಿಂದ ಪ್ರತಿಕ್ರಿಯೆ

ಹೀಗಾಗಿ ಡಿ.ಕೆ ಶಿವಕುಮಾರ್ ಅಸಮಧಾನಪೂರಿತ ಪ್ರತಿಕ್ರಿಯೆ ನೀಡಿದ್ದಾರೆ. ಕಾವೇರಿ ಜಲ ವಿವಾದ ಸಂಬಂಧ ಸಭೆ ನಡೆಸಲು ದೆಹಲಿಗೆ ತೆರಳಿರುವ ಅವರು ಅಲ್ಲಿಂದಲೇ ತಮ್ಮ ಪ್ರತಿಕ್ರಿಯೆ ನೀಡಿದ್ದರೆ.

ಜಾತಿ ಗಣತಿ ವರದಿ ಅಂಗೀಕಾರ ವಿರೋಧಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ತಾವು ಪತ್ರ ಬರೆದಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿ ಆಗಿರುವುದನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಾರಸಗಟಾಗಿ ತಳ್ಳಿ ಹಾಕಿದ್ದಾರೆ.

ತಾವು ಸಿಎಂ ಅವರಿಗೆ ಯಾವುದೇ ಪತ್ರ ಬರೆದಿಲ್ಲ. ಈ ವಿಚಾರವಾಗಿ ಅವರ ಜತೆ ಚರ್ಚೆಯನ್ನೂ ನಡೆಸಿಲ್ಲ ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೂ ಈ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿ ಆಗಿರುವುದು ಸತ್ಯಕ್ಕೆ ದೂರವಾದುದು ಹಾಗೂ ಕಪೋಲ ಕಲ್ಪಿತ. ತಮ್ಮ ಮತ್ತು ಸಿಎಂ ಸಿದ್ದರಾಮಯ್ಯ ಅವರ ನಡುವೆ ತಂದು ಹಾಕಲು, ಒಡಕು ಮೂಡಿಸಲು ಈ ಸುಳ್ಳು ಸುದ್ದಿಯನ್ನು ಸೃಷ್ಠಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ತಂಗಡಗಿ ಹೇಳಿದ್ದೇನು?

ಬುಧವಾರ ಈ ವಿಚಾರವಾಗಿ ಸಚಿವ ಶಿವರಾಜ ತಂಗಡಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕಾಂತರಾಜು ಅವರ ವರದಿ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಮಗೆ ಬರೆದಿದ್ದಾರೆ ಎನ್ನಲಾದ ಪತ್ರ ಇನ್ನು ತಲುಪಿಲ್ಲ ಎಂದಿದ್ದರು.

ಉಪಮುಖ್ಯಮಂತ್ರಿಗಳು ಬರೆದಿದ್ದಾರೆ ಎನ್ನಲಾದ ಪತ್ರ ತಲುಪಿದರೆ ಖುದ್ದಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ. ಪತ್ರ ನೋಡದೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದರು.

ಕಾಂತರಾಜು ಅವರ ವರದಿಯಲ್ಲಿ ಏನಿದೆ ಎಂಬುದೆ ಇನ್ನು ತಿಳಿದಿಲ್ಲ. ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರತಿಯೊಂದು ಸಮುದಾಯದ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಸಮೀಕ್ಷೆ ನಡೆಸಲಾಗಿದೆ. ಕಾಂತರಾಜು ಅವರ ವರದಿ ಸ್ವೀಕಾರ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು‌ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂತರಾಜು ವರದಿ ಬಗ್ಗೆ ಕೆಲವೊಂದು ಸಮುದಾಯದಿಂದ ವಿರೋಧ ವ್ಯಕ್ತವಾಗಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ವರದಿ ಸ್ವೀಕಾರ ಆಗುವುದಕ್ಕೂ ಮುನ್ನವೇ ವಿರೋಧ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದರು.