ಬೆಂಗಳೂರು: ಆದಾಯ ತೆರಿಗೆ ಜಂಟಿ ಆಯುಕ್ತನೆಂಬ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿ ಅವರಿಂದ ಲಕ್ಷಾಂತರ ರೂ. ವಸೂಲಿ ಮಾಡಿದ್ದ ಎಲ್ಐಸಿ ಏಜೆಂಟ್ನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ನಂದಿನಿ ಲೇಔಟ್ ನಿವಾಸಿ ಮೈಸೂರು ಮೂಲದ ನಾಗೇಂದ್ರ ಅಲಿಯಾಸ್ ಮಂಜುನಾಥ್ ನಾಯಕ್ (40) ಬಂಧಿತ. ಈತ ಕಳೆದ ಒಂದು ವರ್ಷದಿಂದ ಬೆಂಗಳೂರು ಸೇರಿ ವಿವಿಧೆಡೆ ಸರ್ಕಾರಿ ಅಧಿ ಕಾರಿಗಳಿಗೆ ಕರೆ ಮಾಡಿ ತಾನು ಆದಾಯ ತೆರಿಗೆ ಜಂಟಿ ಆಯುಕ್ತ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದ.
ನೀವು ಅಕ್ರಮ ಸಂಪತ್ತು ಗಳಿಕೆ ಮಾಡಿದ್ದೀರಿ ಎಂಬ ಬಗ್ಗೆ ಐಟಿ ಇಲಾಖೆಗೆ ದೂರು ಬಂದಿದೆ. ನಿಮ್ಮ ಮನೆ ಮೇಲೆ ಐಟಿ ತಂಡ ದಾಳಿ ನಡೆಸಲಿದೆ.
ಈ ರೀತಿ ದಾಳಿಯಾದರೆ ಮುಂದೆ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಇದರಿಂದ ನಿಮಗೆ ಸಾಕಷ್ಟು ತೊಂದರೆ ಉಂಟಾಗುತ್ತದೆ ಎಂದು ಹೆದರಿಸುತ್ತಿದ್ದ. ಹಣ ನೀಡಿದರೆ ವಿಚಾರಣೆ ಆಗದಂತೆ ನೋಡಿಕೊಂಡು ಎನ್ಒಸಿ ನೀಡುವುದಾಗಿ ಹೇಳಿ ಸರ್ಕಾರಿ ಅಧಿಕಾರಿಗಳಿಂದ ಹಣ ಪಡೆದು ಪರಾರಿಯಾಗುತ್ತಿದ್ದ.
ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಸುಲಭವಾಗಿ ಹಣಗಳಿಸಲು ಈ ದಾರಿ ಹುಡುಕಿದ್ದ. ನಿವೃತ್ತಿಯ ಅಂಚಿನಲ್ಲಿರುವ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಅವರಿಂದ ಹಣ ವಸೂಲಿ ಮಾಡುತ್ತಿದ್ದ. ಎಲ್ಐಸಿ ಮೆಚ್ಯುರಿಟಿ ಹಣ ಪಡೆಯುವ ವೇಳೆ ನಿವೃತ್ತಿ ಹೊಂದುತ್ತಿರುವ ಸರ್ಕಾರಿ ಅಧಿಕಾರಿಗಳ ಮಾಹಿತಿ ಕಲೆ ಹಾಕುತ್ತಿದ್ದ. ನಂತರ ಅವರಿಗೆ ಕರೆ ಮಾಡಿ ನಿಮ್ಮ ಆಸ್ತಿ ವಿವರ ನನ್ನ ಬಳಿ ಇದೆ. ಅದಕ್ಕೆ ಲೆಕ್ಕ ಹೇಳಿ ಎಂದು ಕೇಳುತ್ತಿದ್ದ. ಈತನ ಮಾತನ್ನು ನಂಬಿದ್ದ ಕೆಲ ಸರ್ಕಾರಿ ಅಧಿಕಾರಿಗಳು ಲಕ್ಷಾಂತರ ರೂ. ನೀಡಿದ್ದಾರೆ ಎನ್ನಲಾಗಿದೆ. ಆದರೆ, ಹಣ ಕಳೆದುಕೊಂಡ ಕೆಲ ಅಧಿಕಾರಿಗಳು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಾಗೇಂದ್ರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಅಶೋಕನಗರ ಪೊಲೀಸರು, ಗರುಡ ಮಾಲ್ನ ಕಾಫಿ ಡೇಯಲ್ಲಿದ್ದ ಸಿಸಿ ಕ್ಯಾಮರಾ ಮೂಲಕ ಆತನ ಭಾವಚಿತ್ರ ಸೆರೆ ಹಿಡಿದು ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲೇ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಗೊಂದಲದ ಹೇಳಿಕೆ ನೀಡುತ್ತಿದ್ದು, ತಾನು ವಂಚಿಸಿದ ಅಧಿಕಾರಿಗಳ ಬಗ್ಗೆ ಸೂಕ್ತ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಆರ್ಟಿಒ ಅಧಿಕಾರಿಯಾಗಿರುವ ಆನಂದಯ್ಯ (59) ಅವರಿಗೆ ಫೆ.17ರ ಸಂಜೆ ಕರೆ ಮಾಡಿದ್ದ ನಾಗೇಂದ್ರ, ತನ್ನನ್ನು ಐಟಿ ಇಲಾಖೆಯ ಜಂಟಿ ಆಯುಕ್ತ ಮಂಜುನಾಥ್ ನಾಯಕ್ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ವಿರುದ್ಧ ಐಟಿ ಇಲಾಖೆಗೆ ದೂರು ಬಂದಿದ್ದು, ನಿಮ್ಮ ಮನೆಯ ಮೇಲೆ ದಾಳಿ ಮಾಡಬೇಕಾಗುತ್ತದೆ ಎಂದು ಹೆದರಿಸಿದ್ದ. ನಿಮಗೆ ನನ್ನಿಂದ ಸಹಾಯ ಬೇಕಾದರೆ 15 ಲಕ್ಷ ರೂ. ನೀಡಬೇಕು. ನಿಮಗೆ ಎನ್ಒಸಿ ಕೊಡುತ್ತೇನೆ ಎಂದು ಹೇಳಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ಆನಂದಯ್ಯ, ಅಷ್ಟು ಹಣ ಕೊಡಲು ಕಷ್ಟವಾಗುತ್ತದೆ ಎಂದಾಗ, 8 ಲಕ್ಷ ರೂ. ಕೊಡುವಂತೆ ಆರೋಪಿ ಸೂಚಿಸಿದ್ದ. ಕೊನೆಗೆ 5 ಲಕ್ಷ ರೂ. ಕೊಡುವುದಾಗಿ ಎಂದು ಆನಂದಯ್ಯ ಹೇಳಿದ್ದರು. ಫೆ.18ರ ಬೆಳಗ್ಗೆ ಮತ್ತೆ ಕರೆ ಮಾಡಿದ ಆರೋಪಿಯು ಇಂದೇ ಹಣ ತೆಗೆದುಕೊಂಡು ಬರಬೇಕು. ಇಲ್ಲದಿದ್ದರೆ ದಾಳಿಯಾಗುವುದಾಗಿ ಹೆದರಿಸಿದ್ದ. ತಾನು ಐಟಿ ಕಚೇರಿ ಬಳಿ ಬರುವುದಾಗಿ ಆನಂದಯ್ಯ ಹೇಳಿದಾಗ, ನೀವು ಕಚೇರಿಗೆ ಬರುವುದು ಬೇಡ ಇದು ಗೌಪ್ಯ ವಿಚಾರ. ಆದ್ದರಿಂದ ಗರುಡಾ ಮಾಲ್ನಲ್ಲಿರುವ ಕಾಫಿ ಡೇಗೆ ಬರುವಂತೆ ಸೂಚಿಸಿದ್ದ. ಮಧ್ಯಾಹ್ನ 3 ಗಂಟೆಗೆ ಗರುಡಾ ಮಾಲ್ಗೆ ಬಂದ ಆನಂದಯ್ಯ ಅವರಿಂದ 5 ಲಕ್ಷ ರೂ. ಪಡೆದುಕೊಂಡಿದ್ದ ನಾಗೇಂದ್ರ, ಎನ್ಒಸಿ ತರುವುದಾಗಿ ಹೇಳಿ ಮಾಲ್ನಿಂದ ಹೊರಹೋದವನು ವಾಪಾಸ್ ಬಂದಿಲ್ಲ. ಮೊಬೈಲ್ ನಂಬರ್ಗೆ ಕರೆ ಮಾಡಿದಾಗ ಆಫ್ ಆಗಿತ್ತು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆನಂದಯ್ಯ ಉಲ್ಲೇಖಿಸಿದ್ದಾರೆ.