ನ್ಯೂಸ್

1,200 ಕಿ.ಮೀ. ಚೇಸ್ ಮಾಡಿ ಕರ್ನಾಟಕದಲ್ಲಿ ಅರೆಸ್ಟ್​ ಮಾಡಿದ್ರು ಮುಂಬಯಿ ಪೊಲೀಸ್

ಮುಂಬಯಿ: ಸಿನಿಮೀಯ ಮಾದರಿಯ ಚೇಸಿಂಗ್ ಅದು! ಆರೋಪಿಯೊಬ್ಬನನ್ನು ಬಂಧಿಸೋದಕ್ಕೆ ಗುಜರಾತ್​ನಿಂದ ಕರ್ನಾಟಕಕ್ಕೆ ಬರೋಬ್ಬರಿ 1,200 ಕಿ.ಮೀ. ದೂರ ಕಾರನ್ನು ಚೇಸ್ ಮಾಡಿ ಬಂದಿದ್ರು ಮುಂಬಯಿ ಪೊಲೀಸರು! 24 ಗಂಟೆಗೂ ಅಧಿಕ ಪ್ರಯಾಣ. ಸಾಹಸಮಯ ಚೇಸಿಂಗ್ ಕೊನೆಗೆ ಆರೋಪಿಯನ್ನು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿದ್ರು!

ಬಂಧಿತ ಆರೋಪಿಯ ಹೆಸರು ಶಿವಶಂಕರ ಶರ್ಮಾ (38). ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಬ್ಯವಾರ್ ನ ನಿವಾಸಿ. ಗಾರ್ಮೆಂಟ್ ಎಕ್ಸ್​ಪೋರ್ಟ್​ ಬಿಜಿನೆಸ್ ಮ್ಯಾನ್ ಸೂರತ್​ ನಿವಾಸಿ ಮೊಹಮ್ಮದ್ ಎಥೆಶಾಮ್​ ಅಸ್ಲಾಮ್ ನವಿವಾಲಾ ನೀಡಿದ ದೂರು ಆಧರಿಸಿ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ದೂರಿನ ಪ್ರಕಾರ, ಕೆಲವು ವಾರಗಳ ಹಿಂದೆ ನವಿವಾಲಾಗೆ ಶರ್ಮಾ ಕರೆ ಮಾಡಿ, ಹಿರಿಯ ಐಪಿಎಸ್ ಅಧಿಕಾರಿ ಎಂದು ಪೋಸ್ ನೀಡಿದ್ದ. ಅಲ್ಲದೆ, ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ದಾಖಲಿಸಿಕೊಂಡಿರುವ ಪ್ರಕರಣದ ವಿಚಾರ ಮಾತನಾಡಿದ್ದ. ರಫ್ತು ನಿಯಮ ಉಲ್ಲಂಘನೆಗಾಗಿ ಪ್ರಕರಣ ದಾಖಲಾಗಿದೆ. ಅದನ್ನು ಇತ್ಯರ್ಥಗೊಳಿಸಿಕೊಡುವುದಾಗಿ ನವಿವಾಲಾರನ್ನು ಮುಂಬೈನ ಮರೈನ್ ಡ್ರೈವ್​ನ ಪ್ರತಿಷ್ಠಿತ ಹೋಟೆಲ್ ಗೆ ಬರಮಾಡಿಕೊಂಡಿದ್ದ. ನಂತರ ರೂಮ್ ಒಂದರಲ್ಲಿ ಕೂಡಿ ಹಾಕಿ ಒತ್ತೆಯಾಳನ್ನಾಗಿಸಿ ಗುಜರಾತ್​ಗೆ ತೆರಳಿ 16 ಲಕ್ಷ ರೂಪಾಯಿ ನಗದನ್ನು ಸೂರತ್​ನಿಂದ ಸಂಗ್ರಹಿಸಿದ್ದ. ಶರ್ಮಾ ಮತ್ತು ಸಹಚರರು ಈ ಕೆಲಸ ಮಾಡಿದ್ದು, 16 ಲಕ್ಷ ರೂಪಾಯಿ ಪಾವತಿಸಿದ ನಂತರವಷ್ಟೇ ಅಪಹರಣದ ಬೆದರಿಕೆ ಒಡ್ಡಿ ಬಿಡುಗಡೆ ಮಾಡಿದ್ದಾರೆ.

ಘಟನೆ ನಡೆದ ಬೆನ್ನಿಗೆ ನವಿವಾಲಾ ಮೊದಲು ಗುಜರಾತ್ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಮುಂಬಯಿ ಪೊಲೀಸರಿಗೆ ದೂರು ಕೊಟ್ಟಿದ್ದರು. ಕಳೆದ ವಾರ ಈ ಬಗ್ಗೆ ಪ್ರಕರಣ ದಾಖಲಿಸಿದ ಮುಂಬೈ ಮರೈನ್​ ಡ್ರೈವ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಶುರುಮಾಡಿದ್ದರು. ನಕಲಿ ಐಪಿಎಸ್ ಅಧಿಕಾರಿ ಶರ್ಮಾ ಗುಜರಾತ್​ನಲ್ಲಿ ಇರುವುದು ಖಚಿತವಾಗುತ್ತಿದ್ದಂತೆ ಬಂಧನಕ್ಕೆ ಬಲೆ ಬೀಸಿದ್ದರು. ಪೊಲೀಸರ ಕಾರ್ಯಾಚರಣೆಯ ಸುಳಿವು ಸಿಕ್ಕ ಶರ್ಮಾ ಸ್ಥಳ ಬದಲಾಯಿಸುತ್ತ, ಬದಲಾಯಿಸುತ್ತ ರಸ್ತೆ ಮೂಲಕ ಪರಾರಿಯಾಗಲು ಶ್ರಮಿಸಿದ್ದ. ಬೆಂಬಿಡದ ಪೊಲೀಸರು ಶರ್ಮಾನನ್ನು ಮಂಗಳವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ನಂತರ ಮುಂಬೈಗೆ ಕರೆತಂದು ಕೋರ್ಟ್​ಗೆ ಹಾಜರುಪಡಿಸಿ ಅರೆಸ್ಟ್​ ದಾಖಲಿಸಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಶರ್ಮಾ ತನ್ನ ಕಿರಾತಕ ಇತಿಹಾಸದ ಸುಳಿವು ನೀಡಿದ್ದು ಇಂತಹ ಅನೇಕ ಕೃತ್ಯಗಳನ್ನು ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)