ನ್ಯೂಸ್

ಕೇಂದ್ರ ವಿಭಾಗ ಡಿಸಿಪಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ; ಗಲಿಬಿಲಿಯಾದ ಖಾಕಿ

ಬೆಂಗಳೂರು: ಸಚಿವರು, ಅಧಿಕಾರಿಗಳ ಮತ್ತು ಸಾರ್ವಜನಿಕರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚಿಸುವುದು ಕೇಳಿದ್ದೆವೆ. ಇಲ್ಲೊಬ್ಬ ಕಿಡಿಗೇಡಿ ಕೇಂದ್ರ ವಿಭಾಗ ಡಿಸಿಪಿ ಕಚೇರಿಯ ಅಧಿಕೃತ ಫೇಸ್ ಬುಕ್ ಖಾತೆಯನ್ನೇ ನಕಲಿ ಖಾತೆ ತೆರೆದಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಕೇಂದ್ರ ವಿಭಾಗ ಹೆಡ್‌ಕಾನ್‌ಸ್ಟೆಬಲ್ ಚಂದ್ರಶೇಖರ್ ಗೌಡ, ದೂರು ಸಲ್ಲಿಸಿದ್ದಾರೆ.ಇದರ ಮೇರೆಗೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ವಿಭಾಗದ ಡಿಸಿಪಿ ಕಚೇರಿ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದಿದ್ದು, ಅದರಲ್ಲಿ ಡಿಸಿಪಿ ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಾರೆ. ಆದರೆ, ಇಲ್ಲೊಬ್ಬ ಸೈಬರ್ ಕಳ್ಳ, ಡಿಸಿಪಿ ಕಚೇರಿ ಅಧಿಕೃತ ಖಾತೆಯಂತೆ ನಕಲಿ ಫೇಸ್ ಬುಕ್ ಖಾತೆ ತೆರೆದು ಸಾರ್ವಜನಿಕರಿಗೆ ದಾರಿ ತಪ್ಪಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.