ನ್ಯೂಸ್

ಉತ್ತರಪ್ರದೇಶದಲ್ಲಿ ನಕಲಿ ರಾಯಭಾರಿ ಕಚೇರಿ!: ನಕಲಿ ಪಾಸ್​ಪೋರ್ಟ್​ಗಳು ಸೇರಿ 34 ಸ್ಟ್ಯಾಂಪ್ಸ್​ ಪತ್ತೆ! Ghaziabad

Ghaziabad: ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಆರೋಪದ ಮೇಲೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಹರ್ಷವರ್ಧನ್ ಜೈನ್ ಎಂಬಾತನ್ನನ್ನು ಮಂಗಳವಾರ ಬಂಧಿಸಲಾಗಿತ್ತು. ಇದೀಗ ಈತನ ಬಳಿ ನಕಲಿ ದಾಖಲೆಗಳು, ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ. ಅಲ್ಲದೆ, ಈತ ಇವುಗಳನ್ನು ಹವಾಲಾ ದಂಧೆ ನಡೆಸಲು ಬಳಸುತ್ತಿದ್ದಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಗಾಜಿಯಾಬಾದ್​ನಲ್ಲಿರುವ ಕವಿ ನಗರ ಪ್ರದೇಶದಲ್ಲಿ ಜೈನ್ ಬಂಧನವಾಗಿದ್ದು, ಉತ್ತರಪ್ರದೇಶ ವಿಶೇಷ ಕಾರ್ಯಪಡೆ (STF) ನೋಯ್ಡಾ ಘಟಕವು 44 ಲಕ್ಷಕ್ಕೂ ಅಧಿಕ ನಗದು ಮತ್ತು ಹಲವಾರು ದೇಶಗಳ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದೆ. ನಾಲ್ಕು ವಾಹನಗಳು ಮತ್ತು 18 ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳು ಹಾಗೂ 12 ಪಾಸ್‌ಪೋರ್ಟ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಾಂಗ ಸಚಿವಾಲಯದ ಮುದ್ರೆ, ಕ್ರಮವಾಗಿ 2 ನಕಲಿ ಪ್ಯಾನ್ ಕಾರ್ಡ್‌ ಮತ್ತು ಪ್ರೆಸ್ ಕಾರ್ಡ್‌, ವಿವಿಧ ದೇಶಗಳನ್ನು ಒಳಗೊಂಡ ಕಂಪನಿಗಳ 34 ಸ್ಟ್ಯಾಂಪ್​ಗಳು ಮತ್ತು ವಿವಿಧ ಕಂಪನಿಗಳ ದಾಖಲೆಗಳನ್ನು ಸಹ ರಚಿಸಿದ್ದನು. ಈ ಎಲ್ಲ ದಾಖಲೆಗಳನ್ನು ಸಹ ವಶಕ್ಕೆ ಪಡೆದಿದ್ದಾಗಿ ತಿಳಿಸಿದ್ದಾರೆ. ಜೈನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಡಿಗೆ ಮನೆಯೊಂದರಲ್ಲಿ ರಾಯಭಾರಿ ಕಚೇರಿ!

ಆರೋಪಿ ಹರ್ಷವರ್ಧನ್ ಜೈನ್, ಗಾಜಿಯಾಬಾದ್​ನ ಕವಿನಗರ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದರು. ಆರೋಪಿ ಜೈನ್​ ವೆಸ್ಟಾರ್ಕ್ಟಿಕಾ, ಸಬೋರ್ಗಾ, ಪೌಲ್ವಿಯಾ ಮತ್ತು ಲೋಡೋನಿಯಾದಂತಹ ನಕಲಿ ದೇಶಗಳ ರಾಯಭಾರಿ ಎಂದು ಹೇಳಿಕೊಂಡಿದ್ದನು ಎಂದು ಯುಪಿ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಭ್ ಯಶ್ ತಿಳಿಸಿದ್ದಾರೆ.(ಏಜೆನ್ಸೀಸ್​)