ನ್ಯೂಸ್

ಕೆಐಎಎಲ್‌ಗೆ ಹುಸಿ ಬಾಂಬ್ ಬೆದರಿಕೆ ಕೆಲಕಾಲ ಆತಂಕ ಪರಿಸ್ಥಿತಿ ನಿರ್ಮಾಣ

ಬೆಂಗಳೂರು: ಇತ್ತೀಚೆಗೆ ಶಾಲಾ-ಕಾಲೇಜು ಮತ್ತು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆಯ ಕರೆಗಳು ಹೆಚ್ಚಾಗುತ್ತಿದ್ದು, ಭಾನುವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಕಮಾಂಡ್ ಸೆಂಟರ್‌ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ನಿಲ್ದಾಣದಲ್ಲಿ ಕೆಲಕಾಲ ಆತಂಕ ಮನೆ ಮಾಡಿತ್ತು.
ಏರ್‌ಪೋರ್ಟ್‌ನ ಕಮಾಂಡ್ ಸೆಂಟರ್‌ಗೆ ಹಾಗೂ ಇಂಡಿಗೊ ವಿಮಾನಯಾನ ಸಂಸ್ಥೆಗೆ ಮಧ್ಯಾಹ್ನ ಟ್ವೀಟ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ದುಷ್ಕರ್ಮಿಗಳು, ಇಂಡಿಗೊದ ಆರು ವಿಮಾನಗಳಲ್ಲಿ ತಲಾ ಇಬ್ಬರಂತೆ ೧೨ ಮಂದಿ ಬಾಂಬರ್‌ಗಳು ಇದ್ದಾರೆ. ಇಂಡಿಗೊ ಏರ್‌ಲೈನ್ಸ್‌ನ ಐಎಕ್ಸ್-೨೩೩, ಐಎಕ್ಸ್-೩೭೫, ಐಎಕ್ಸ್-೪೮೧, ಐಎಕ್ಸ್-೩೮೩, ಐಎಕ್ಸ್-೫೪೯ ಮತ್ತು ಐಎಕ್ಸ್-೩೯೯ ವಿಮಾನಗಳಲ್ಲಿ ಬಾಂಬರ್‌ಗಳು ಇದ್ದಾರೆ ಎಂದು ದುಷ್ಕರ್ಮಿಗಳು ಅನಾಮಧೇಯ ಟ್ವಿಟ್ಟರ್ ಖಾತೆಯಿಂದ ಬೆದರಿಕೆ ಸಂದೇಶ ಕಳುಹಿಸಿದ್ದರು.ಈ ವಿಚಾರ ತಿಳಿಯುತ್ತಿದ್ದಂತೆ ಕಮಾಂಡ್ ಸೆಂಟರ್ ಮತ್ತು ಇಂಡಿಗೊ ವಿಮಾನಯಾನ ಸಂಸ್ಥೆ ಸಿಬ್ಬಂದಿ ಆತಂಕಕ್ಕೀಡಾದರು. ಮತ್ತೊಂದೆಡೆ ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರು ಸಹ ಭಯಭೀತರಾದರು. ಆ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಕುಟುಂಬ ಸದಸ್ಯರು ಸಹ ಆತಂಕಗೊಂಡಿದ್ದರು. ಬಳಿಕ ಇದು ಹುಸಿ ಸಂದೇಶವೆಂದು ಗೊತ್ತಾದ ನಂತರ ಎಲ್ಲರೂ ನಿಟ್ಟುಸಿರು ಬಿಟ್ಟರು.
ವಾರದಲ್ಲಿ ಇದು ಎರಡನೇ ಬಾರಿ:
ಬಾಂಬ್ ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸಿಬ್ಬಂದಿಯು ಏರ್‌ಪೋರ್ಟ್‌ನಲ್ಲಿ ತಪಾಸಣೆ ಮಾಡಿದರು. ಕಳೆದೊಂದು ವಾರದಲ್ಲಿ ಕೆಐಎಎಲ್‌ಗೆ ಎರಡನೇ ಬಾರಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಏರ್‌ಪೋರ್ಟ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಭದ್ರತೆ ಹೆಚ್ಚಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಕೆಐಎಎಲ್‌ಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಬಾಂಬ್ ಬೆದರಿಕೆ ಸಂದೇಶದ ಸಂಬಂಧ ಕೆಐಎಎಲ್ ಅಧಿಕಾರಿಗಳು ಹಾಗೂ ಇಂಡಿಗೊ ಏರ್‌ಲೈನ್ಸ್ ಪ್ರತಿನಿಧಿಗಳು ದೂರು ಕೊಟ್ಟಿಲ್ಲ. ಹೀಗಾಗಿ, ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಬ್ ಬೆದರಿಕೆ ಹಾಕಿದವನ ಬಂಧನವಾಗಿತ್ತು:
ನಗರದ ಕಾಲೇಜುಗಳಿಗೆ ಬಾಂಬ್ ಇಟ್ಟಿರುವುದಾಗಿ ಇತ್ತೀಚೆಗೆ ಇ-ಮೇಲ್ ಮಾಡಿ ಬೆದರಿಕೆ ಹಾಕಿದ್ದ ಬಿ.ಕಾಂ.ಪದವಿಧರನನ್ನು ಇತ್ತೀಚೆಗೆ ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದರು
ಪಶ್ಚಿಮ ಬಂಗಾಳ ಮೂಲದ ದೀಪಾಂಜನ್ ಮಿತ್ರಾ(೪೮) ಎಂಬ ಆರೋಪಿ ಅ.೪ರಂದು ಬೆಂಗಳೂರು ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ) ಕಾಲೇಜು ಮತ್ತು ಬಿಎಂಎಸ್ ಕಾಲೇಜಿನ ಆವರಣದಲ್ಲಿ ಹೈಡ್ರೋಜನ್ ಆಧಾರಿತ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಇರಿಸಿರುವುದಾಗಿ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದ. ಈ ಸಂಬಂಧ ವಿವಿಪುರ ಮತ್ತು ಹನುಮಂತನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದರು.