ಹೈದರಾಬಾದ್: ವ್ಯಕ್ತಿಯೊಬ್ಬ ಸೇನಾಧಿಕಾರಿಯ ಸೋಗಿನಲ್ಲಿ ಸುಮಾರು 17 ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ, ಬರೋಬ್ಬರಿ 6.61 ಕೋಟಿ ರೂ. ವಂಚಿಸಿರುವ ಪ್ರಕರಣ ಹೈದಾರಾಬಾದ್ನಲ್ಲಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ನಕಲಿ ಸೇನಾಧಿಕಾರಿಯನ್ನು ಮುದವತ್ ಶ್ರೀನು ನಾಯ್ಕ್ (42) ಎಂದು ಗುರುತಿಸಲಾಗಿದೆ. ಈತ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಸೈನಿಕಪುರಿ ಏರಿಯಾ ನಿವಾಸಿ. ಕೇವಲ 9ನೇ ತರಗತಿ ಓದಿರುವ ಮುದವತ್, ಭಾರತೀಯ ಸೇನೆಯ ಮೇಜರ್ ಎಂದು ಹೇಳಿಕೊಂಡು ಸೇನಾಧಿಕಾರಿಯಂತೇ ಯೂನಿಫಾರ್ಮ್ ತೊಟ್ಟ ಯಾಮಾರಿಸುತ್ತಿದ್ದ.
ಶ್ರೀನಿವಾಸ್ ಚೌಹಾಣ್ ಹೆಸರಲ್ಲಿ 12/07/1979ರ ಬದಲಾಗಿ 27/08/1986 ಸುಳ್ಳ ಜನ್ಮ ದಿನಾಂಕ ಹೊಂದಿದ್ದ ಆಧಾರ್ ಕಾರ್ಡ್ ಪಡೆದಿದ್ದ. ಅಲ್ಲದೆ, ಮೇಘಾಲಯ ಸಿಎಂಜೆ ಯೂನಿವರ್ಸಿಟಿಯಲ್ಲಿ ಎಂಟೆಕ್ ಪದವಿ ಪಡೆದಿರುವ ನಕಲಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದ. ಮಹಿಳೆಯರನ್ನು ಯಾಮಾರಿಸಲು ಏನೆಲ್ಲಾ ದಾಖಲೆಗಳ ಅವಶ್ಯಕತೆ ಇತ್ತೋ ಅದನೆಲ್ಲ ಆರೋಪಿ ರೆಡಿ ಮಾಡಿಕೊಂಡಿದ್ದ.
ಚೌಹಾಣ್ ಹೆಸರಲ್ಲಿ ಸೇನೆಯ ನಕಲಿ ಗುರುತಿನ ಚೀಟಿಯನ್ನೂ ಹೊಂದಿದ್ದ. ಯೂನಿಫಾರ್ಮ್, ಕ್ಯಾಪ್ಸ್, ಶೂ, ಅವಾರ್ಡ್ ಬ್ಯಾಡ್ಜ್ಸ್, ನಕಲಿ ಪಿಸ್ತೂಲ್ ಖರೀದಿಸಿ ಅವುಗಳನ್ನು ಧರಿಸಿ ಫೋಟೋ ತೆಗೆಸಿಕೊಂಡು ಯುವತಿಯರನ್ನು ತನ್ನತ್ತ ಸೆಳೆಯಲು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ. ಮೋಸ ಹೋದ ಮಹಿಳೆಯರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.
ಇತ್ತ ಸೇನಾಧಿಕಾರಿಯನ್ನು ಮದುವೆಯಾಗುವ ಆಸೆಯಲ್ಲಿ ಹಣ ಕಳೆದುಕೊಂಡ ಮಹಿಳೆಯರು ಚಿಂತೆಯಲ್ಲಿ ಮುಳುಗುವಂತಾಗಿದೆ. (ಏಜೆನ್ಸೀಸ್)