ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸಾಗರದಲ್ಲಿ ಬಿಜೆಪಿ ಪ್ರಮುಖರಾದ ಪರಶುರಾಮ್, ಅರುಣ ಕುಗ್ವೆ, ಕೆ.ಆರ್.ಗಣೇಶಪ್ರಸಾದ್, ಪ್ರಸನ್ನ ಕೆರೆಕೈ, ದೇವೇಂದ್ರಪ್ಪ ಮತ್ತಿತರರು ಪ್ರತಿಭಟನೆ ನಡೆಸಿದರು.  
ನ್ಯೂಸ್

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲ

ಶಿವಕುಮಾರ ಎಸ್.ಪಿ.

ಸಾಗರ: ಮೈಸೂರಿನ ಕಲ್ಯಾಣಗಿರಿ ಬಡಾವಣೆ ಉದಯನಗರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆಯ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿ ಸಾಗರ ಬಿಜೆಪಿ ನಗರ ಮಂಡಲ ಹಾಗೂ ಯುವ ಮೋರ್ಚಾ ಪದಾಧಿಕಾರಿಗಳು ಎಸಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ದೆಹಲಿ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದಕ್ಕೆ ಓರ್ವನನ್ನು ಬಂಧಿಸಲಾಗಿದೆ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಒಂದು ಕೋಮಿನ ಕೆಲವರು ಪೊಲೀಸರ ಮೇಲೆ ಹಲ್ಲೆ ನಡೆಸಿ, ವಾಹನ ಜಖಂಗೊಳಿಸಿ ಶಾಂತಿ ಕದಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ವಿಲವಾಗಿ ಇಂತಹ ವಿಷಯಗಳ ಮೂಲಕ ಜನರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಯುವ ಮೋರ್ಚಾ ನಗರ ಮಂಡಲ ಅಧ್ಯಕ್ಷ ಪರಶುರಾಮ್ ದೂರಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅರುಣ ಕುಗ್ವೆ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯೇ ಇಂತಹ ಘಟನೆಗಳಿಗೆ ಕಾರಣವಾಗಿದೆ. ರಾಜ್ಯದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದೆ. ಇದರ ಹಿಂದಿರುವ ಶಕ್ತಿಯನ್ನು ಮಟ್ಟಹಾಕಬೇಕು ಎಂದು ಆಗ್ರಹಿಸಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ಪ್ರಸನ್ನ ಕೆರೆಕೈ, ದೇವೇಂದ್ರಪ್ಪ, ಪ್ರೇಮಾ ಕಿರಣ್ ಸಿಂಗ್, ಸತೀಶ್, ಸಂತೋಷ್ ಶೇಟ್, ರಾಯಲ್ ಸಂತೋಷ್, ಬಿ.ಟಿ.ರವೀಂದ್ರ, ಅರವಿಂದ ರಾಯ್ಕರ್, ಪ್ರಸನ್ನ, ಆದರ್ಶ ಇತರರಿದ್ದರು.