ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಗುತ್ತಿಗೆದಾರರ ನಡುವೆ ಉಂಟಾಗಿರುವ ಬಿರುಕು ಹೆಚ್ಚುತ್ತಲೇ ಇದ್ದು, ಸಣ್ಣ ಪುಟ್ಟ ಗುತ್ತಿಗೆದಾರರು ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ.
ಬಿಬಿಎಂಪಿಯಲ್ಲಿ 5 ರಿಂದ 10 ಕೋಟಿ ರೂ ಅಂದಾಜಿನಲ್ಲಿ ಕೆಲಸ ಮಾಡುವ ಗುತ್ತಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದೊಡ್ಡ ಮೊತ್ತದ ಕೆಲಸ ಮಾಡುವ ಕ್ಲಾಸ್ 1 ಗುತ್ತಿಗೆದಾರರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಕ್ಲಾಸ್ 2 ಗುತ್ತಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಹೆಚ್ಚು ಕೆಲಸ ಮಾಡುವ ಅವಕಾಶಗಳು ಲಭ್ಯವಾಗುತ್ತಲೇ ಬಂದಿದೆ.
ಸಂಘಟನೆಯಲ್ಲಿ ಒಟ್ಟಾಗಿದ್ದ ಗುತ್ತಿಗೆದಾರರಲ್ಲಿ, ಕ್ರಮೇಣ ಬಿರುಕು ಮೂಡಿದ್ದು, ಬಿಬಿಎಂಪಿ ರಾಜಕಾರಣದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪರವಾಗಿ ಧ್ವನಿ ಎತ್ತಿದವರೂ ಇದ್ದಾರೆ. ಈ ಮೊದಲು ಗುತ್ತಿಗೆದಾರರ ಪಕ್ಷ ರಾಜಕಾರಣದಲ್ಲಿ ಸಿಲುಕಿಕೊಂಡಿರಲಿಲ್ಲ. ಕಳೆದ ಎರಡು ದಶಕದಿಂದ ಇತ್ತೀಚೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ ಆ ಪಕ್ಷ ಪರವಾಗಿ ವಾಲುವ ಗುತ್ತಿಗೆದಾರರ ಸಂಖ್ಯೆ ಹೆಚ್ಚುತ್ತಾ ಬಂದಂತೆ ಸಂಘಗಳ ಒಗ್ಗಟ್ಟಿನಲ್ಲಿಯೂ ವ್ಯತ್ಯಾಸಗಳಾಗಿವೆ. ಬಾಕಿ ಬಿಲ್ ಪಾವತಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆ ನೀಡಿ ಗೊಂದಲ ಉಂಟು ಮಾಡಿರುವುದು ಈ ಎಲ್ಲ ಬೆಳವಣಿಗೆಗೆ ಹಿಡಿದ ಕನ್ನಡಿ.
ಮೂರ‌್ನಾಲ್ಕು ಗುಂಪುಗಳಾಗಿರುವ ಗುತ್ತಿಗೆದಾರರನ್ನು ಒಂದುಗೂಡಿಸುವ ಪ್ರಯತ್ನಗಳು ಹಲವಾರು ಬಾರಿ ನಡೆದರೂ ಪ್ರಯೋಜನವಾಗಿಲ್ಲ.
ಕೆಲವರ ಪ್ರತಿಷ್ಠೆಯಲ್ಲಿ ಸಿಲುಕಿಕೊಂಡು ಬಣಗಳಾಗಿದ್ದು, ಸಣ್ಣ ಗುತ್ತಿಗೆದಾರರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಯಾರ ಕಡೆಗೆ ಬೆಂಬಲವಾಗಿ ನಿಂತರೂ ಸಮಸ್ಯೆ ಎನ್ನುವುದು ಅವರ ಗಮನಕ್ಕಿದೆ. ಹಾಗಾಗಿ ಮೌನಕ್ಕೆ ಜಾರಿರುವ ಸಣ್ಣ ಗುತ್ತಿಗೆದಾರರು, ಬಾಕಿ ಬಿಲ್ ಕೊಡಿಸಿದರೆ ಸಾಕು ಎಂದು ಸರ್ಕಾರದತ್ತ ನೋಡುತ್ತಾ ನಿಟ್ಟುಸಿರು ಬಿಡುತ್ತಿದ್ದಾರೆ.
ಸುಳ್ಳು ಬಿಲ್ ಸೃಷ್ಟಿ ಮಾಡಿರುವುದರ ಬಗ್ಗೆ ತನಿಖೆ ನಡೆಸಲು ಸರ್ಕಾರ ಮುಂದಾಗಿದ್ದು, ಕೆಲ ಗುತ್ತಿಗೆದಾರರಿಗೆ ನಡುಕ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿಯೇ ಹಿಂದೆ ನಡೆದಿರುವ ಬಿಬಿಎಂಪಿ ಬೆಂಕಿ ಪ್ರಕರಣಗಳನ್ನು ತಾಳೆ ಹಾಕಲಾಗುತ್ತಿದೆ.
ಬಿಜೆಪಿ ಹಣಿಯಲು ಸಜ್ಜಾದ ಕೈ ಪಡೆ
ಬಿಬಿಎಂಪಿಯಲ್ಲಿ ಬೆಂಕಿ ಬೀಳುವುದು ಇದೇ ಮೊದಲೇನಲ್ಲ. ಬೆಂಕಿ ಬಿದ್ದು ಕಡತಗಳು ಸುಟ್ಟು ಹೋದವೆಂದು ಹೇಳಿ ಹಲವು ಪ್ರಕರಣಗಳನ್ನು ಮುಚ್ಚಿ ಹಾಕಲಾಗಿದೆ ಎನ್ನುವ ಆರೋಪ ಸಾರ್ವಜನಿಕವಾಗಿದೆ. ಹಿಂದಿನಿಂದ ಬೆಂಕಿ ಬಿದ್ದಿರುವ ಪ್ರಕರಣಗಳನ್ನು ಕೆದಕಿರುವ ಕೈ ಪಡೆ, ಬಿಜೆಪಿಯನ್ನು ಹಣಿಯಲು ಮುಂದಾಗಿದೆ.