ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತುಗಳನ್ನು ಮುಂದಿಟ್ಟುಕೊಂಡು ಕೈಪಕ್ಷಕ್ಕೆ ಕಮಲಪಡೆ ತಿವಿದಿದೆ. ಕಾಂಗ್ರೆಸ್‌ನಲ್ಲಿ ಬಣಜಗಳ ತಾರಕಕ್ಕೇರಿದೆ. ವರ್ಗಾವಣೆ ದಂಧೆಗೆ ಸಂಬಂಧಿಸಿದಂತೆ ಮಂತ್ರಿಗಳು ಪರಸ್ಪರ ಕಚ್ಚಾಡುತ್ತಿದ್ದು, ಆಡಳಿತ ಸಂಪೂರ್ಣ ಹಳಿ ತಪ್ಪಿದೆ ಎಂದು ಬಿಜೆಪಿ ಕುಟುಕಿದೆ.
ಸಾಮಾಜಿಕ ಜಾಲ ತಾಣದಲ್ಲಿ ಸರಣಿ ಸಂದೇಶಗಳನ್ನು ರಾಜ್ಯ ಬಿಜೆಪಿ ಹಂಚಿಕೊಂಡಿದೆ. ಬೆಳಗಾವಿಯಲ್ಲಿ ಸಿಎಂ ಬಣದ ಸತೀಶ್ ಜಾರಕಿಹೊಳಿ, ಡಿಸಿಎಂ ಬಣದ ಲಕ್ಷ್ಮಿ ಹೆಬ್ಬಾಳ್ಕರ್‌ರಿಗೂ ೈಟ್. ವಿಜಯಪುರದಲ್ಲಿ ಸಿಎಂ ಬಣದ ಎಂ.ಬಿ.ಪಾಟೀಲ್, ಡಿಸಿಎಂ ಬಣದ ಶಿವಾನಂದ ಪಾಟೀಲ್‌ರಿಗೂ ಮುಸುಕಿನ ಗುದ್ದಾಟ.
ಬೆಂಗಳೂರಿನಲ್ಲಿ ಸಿಎಂ ಬಣದ ಜಮೀರ್‌ಗೂ, ಡಿಸಿಎಂ ಬಣದ ಹ್ಯಾರಿಸ್ ನಡುವೆ ದಂಗಲ್. ಶಿವಮೊಗ್ಗದಲ್ಲಿ ಮೂಲ ಕಾಂಗ್ರೆಸ್ಸಿಗ ಸಂಗಮೇಶ್ ಹಾಗೂ ವಲಸಿಗ ಕಾಂಗ್ರೆಸ್ಸಿಗ ಮಧ ಬಂಗಾರಪ್ಪ ನಡುವೆ ಕಿತ್ತಾಟ. ಇತ್ತ ಬಿ.ಕೆ.ಹರಿಪ್ರಸಾದ್ ಹಾಗೂ ಸಿದ್ದರಾಮಯ್ಯರ ನಡುವೆ ಗಲಾಟೆ ಬೇರೆಯೇ ಮಟ್ಟದಲ್ಲಿದೆ ! ಎಲ್ಲವೂ ಬಯಲಾಗುತ್ತಲೇ ಇದೆ ! ಎಂದು ರಾಜ್ಯ ಬಿಜೆಪಿ ಛೇಡಿಸಿದೆ.
ಬೆಲೆ ಏರಿಕೆಯ ಬರೆ
ರಾಜ್ಯದಲ್ಲಿ ಎಟಿಎಂ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅವೈಜ್ಞಾನಿಕವಾಗಿ ತೆರಿಗೆಗಳನ್ನು ಏರಿಸಿದ ಪರಿಣಾಮ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿ ಬಡ ಮತ್ತು ಮಧ್ಯಮ ವರ್ಗದ ಜನತೆ ಜೀವನ ನಡೆಸುವುದೇ ಕಷ್ಟವಾಗಿದೆ. ಈಗ ಹೋಟೆಲ್ ಆಹಾರ ದರ ಸಹ ಶೇ.10ರಷ್ಟು ಹೆಚ್ಚಾಗಿದ್ದು, ಜನತೆಯ ಜೇಬು ಬರಿದಾಗಲಿದೆ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.