ನ್ಯೂಸ್

ದೆಹಲಿ ಗಲಭೆಗೆ ಸಂಬಂಧಿಸಿದ ಸೂಸೈಡ್​ ಬಾಂಬರ್​ ಬಂಧಿಸಿ ಭಾರಿ ಪ್ರಮಾಣದ ಶಸ್ತ್ರಾಸ್ತ ವಶಪಡಿಸಿಕೊಳ್ಳಲಾಯಿತೇ?

ನವದೆಹಲಿ: ನಡುವಿಗೆ ಸೂಸೈಡ್​ ವೆಸ್ಟ್​ ಕಟ್ಟಿಕೊಂಡಿರುವ ವ್ಯಕ್ತಿಯೊಬ್ಬನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ರಾಷ್ಟ್ರೀಯ ತನಿಖಾ ದಳ ನಡೆಸಿದ ದಾಳಿಯ ವೇಳೆ ಭಾರಿ ಪ್ರಮಾಣದ ಸೂಸೈಡ್​ ವೆಸ್ಟ್​, ಟೈಮ್​ ಬಾಂಬ್​, ಅಲಾರಂ ಕ್ಲಾಕ್ಸ್​, ಮೊಬೈಲ್​ ಫೋನ್ಸ್​, ಸಿಮ್​ ಕಾರ್ಡ್ಸ್​ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಫೋಟೋ ಕುರಿತಾಗಿ ಬರೆದಿರುವ ಮಾಹಿತಿ ಸುಳ್ಳೆಂಬುದು ಫ್ಯಾಕ್ಟ್​ಚೆಕ್​ ಮೂಲಕ ತಿಳಿದುಬಂದಿದೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕೋಮುಗಲಭೆ ಬೆನ್ನಲ್ಲೇ ಫೇಸ್​ಬುಕ್​ನಲ್ಲಿ ಈ ಪೋಸ್ಟ್​ ಕಾಣಿಸಿಕೊಂಡಿದೆ. ಬಳಕೆದಾರ ದೀಪಕ್​ ಕುಮಾರ್​ ಎಂಬಾತ ಸೂಸೈಡ್​ ವೆಸ್ಟ್​ ಧರಿಸಿರುವ ವ್ಯಕ್ತಿಯ ಫೋಟೋವನ್ನು ಅಪ್​ಲೋಡ್​ ಮಾಡಿ ಹಿಂದಿಯಲ್ಲಿ ಬರೆದು ಪೋಸ್ಟ್ ಮಾಡಿದ್ದಾನೆ. ಅದರ ಸಾರ ಈ ರೀತಿ ಇದೆ- ರಾಷ್ಟ್ರೀಯ ತನಿಖಾ ದಳ ಮತ್ತು ಉತ್ತರ ಪ್ರದೇಶ ಪೊಲೀಸರು ದೆಹಲಿಯ ಸೀಲಾಂಪುರ ಮತ್ತು ಉತ್ತರ ಪ್ರದೇಶದ ಅಮ್ರೋಹದ ಕೆಲ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು, ಗುಮಾಸ್ತರು ಸೇರಿದಂತೆ ಒಟ್ಟು 16 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಇದೇ ವೇಳೆ ಭಾರಿ ಪ್ರಮಾಣದ ಸೂಸೈಡ್​ ವೆಸ್ಟ್​, ಟೈಮ್​ ಬಾಂಬ್​, ಅಲಾರಂ ಕ್ಲಾಕ್ಸ್​, ಮೊಬೈಲ್​ ಫೋನ್ಸ್​, ಸಿಮ್​ ಕಾರ್ಡ್ಸ್​ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬರೆದಿದ್ದಾನೆ.

ಕೊನೆಯಲ್ಲಿ ವಿಶೇಷವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ದೆಹಲಿ ಪ್ರದೇಶಗಳಲ್ಲಿ ಸುತ್ತಾಡಿದ ಕಾರಣದಿಂದಾಗಿ ಇದೆಲ್ಲವು ಸಾಧ್ಯವಾಯಿತು ಎಂದೂ ಉಲ್ಲೇಖಿಸಿದ್ದಾನೆ. ಇತ್ತೀಚೆಗಷ್ಟೇ ನಡೆದ ಈಶಾನ್ಯ ದೆಹಲಿ ಗಲಭೆಯು ಹಿಂಸಾರಕ್ಕೆ ತಿರುಗಿದ್ದರಿಂದ ಭದ್ರತೆಯ ಉಸ್ತುವಾರಿಯನ್ನು ದೋವಲ್​ ಅವರಿಗೆ ವಹಿಸಲಾಗಿತ್ತು. ಈ ವೇಳೆ ಅವರು ಗಲಭೆ ಪೀಡಿತ ಅನೇಕ ಪ್ರದೇಶಗಳಲ್ಲಿ ಸುತ್ತಾಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದರು. ಇದು ಅನೇಕ ಮಾಧ್ಯಮಗಳಲ್ಲಿಯು ಪ್ರಸಾರವಾಗಿದೆ.

ಆದರೆ ಫೇಸ್​ಬುಕ್​ನಲ್ಲಿ ಕಂಡುಬಂದಿರುವ ಮಾಹಿತಿ ಅಕ್ಷರಶಃ ಸುಳ್ಳು ಎಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ತಿಳಿದುಬಂದಿದೆ.​ ಸೂಸೈಡ್​ ವೆಸ್ಟ್​ ಧರಿಸಿರುವ ವ್ಯಕ್ತಿಯ ಫೋಟೋ ಸುಮಾರು 10 ವರ್ಷಗಳಷ್ಟು ಹಿಂದಿನದ್ದಾಗಿದೆ. ಫೋಟೋ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ್ದಾಗಿದೆ. ಇನ್ನು ಎನ್​ಐಎ ದಾಳಿಯು ಕೂಡ ಎರಡು ವರ್ಷದ ಹಿಂದೆ ಸಂಭವಿಸಿತ್ತು. ಹೀಗಾಗಿ ಈ ದಾಳಿಗೂ, ವೈರಲ್​ ಪೋಟೋಗೂ ದೆಹಲಿ ಹಿಂಸಾಚಾರಕ್ಕೂ ಸಂಬಂಧವೇ ಇಲ್ಲ. ಆದರೂ ಫೋಟೋ ಫೇಸ್​ಬುಕ್​ನಲ್ಲಿ 200 ಕ್ಕೂ ಹೆಚ್ಚು ಶೇರ್​ ಆಗಿದೆ.

ಗೂಗಲ್​ ರಿವರ್ಸ್​ ಸರ್ಚ್​​ ಇಂಜಿನ್​​ನಲ್ಲಿ ನೋಡಿದಾಗ 2010ರಲ್ಲೂ ಈ ಫೋಟೋ ವೈರಲ್​ ಆಗಿದೆ. ಫೋಟೋದಲ್ಲಿರುವ ವ್ಯಕ್ತಿ ತಾಲಿವಾನ್​ ಸೂಸೈಡ್​ ಬಾಂಬರ್​. ಆತನನ್ನು ಆಫ್ಘಾನ್​ ಭದ್ರತಾ ಪಡೆ ಫರಾಹಾ ಪ್ರಾಂತ್ಯದಲ್ಲಿ ಬಂಧಿಸಿತ್ತು.

ಪೋಸ್ಟ್​ ಉಲ್ಲೇಖಿಸಿರುವ ದೆಹಲಿಯ ಸೀಲಾಂಪುರ ಮತ್ತು ಯುಪಿಯ ಅಮ್ರೋಹದಲ್ಲಿ ಎನ್​ಐಎ ದಾಳಿಯ ಬಗ್ಗೆ ಜಾಲತಾಣದಲ್ಲಿ ಹುಡುಕಾಡಿದಾಗ ಇದಕ್ಕೆ ಸಂಬಂಧಿಸಿದ್ದ ಸುದ್ದಿ 2018ರಲ್ಲಿ ಅನೇಕ ವೆಬ್​ಸೈಟ್​ನಲ್ಲಿ ಪ್ರಕಟವಾಗಿರುವುದು ಪತ್ತೆಯಾಗಿದೆ. ಅದರ ಪ್ರಕಾರ ದೆಹಲಿ ಮತ್ತು ಯುಪಿ ಪ್ರದೇಶಗಳಲ್ಲಿ ಪೊಲೀಸರು ದಾಳಿ ಮಾಡಿ​ ಐಸಿಸ್​ಗೆ ಸಬಂಧಿಸಿದ 10 ಮಂದಿಯನ್ನು ಬಂಧಿಸಿದ್ದರು ಎಂದು ವರದಿಯಾಗಿದೆ.

ಹೀಗಾಗಿ ಸದ್ಯದ ದೆಹಲಿ ಗಲಭೆಯೂ ಫೇಸ್​ಬುಕ್​ನಲ್ಲಿ ವೈರಲ್​ ಆಗಿರುವ ಪೋಸ್ಟ್​ಗೂ ಯಾವುದೇ ಸಂಬಂಧವಿಲ್ಲ ಎಂದು ಫ್ಯಾಕ್ಟ್​ಚೆಕ್​ ಮೂಲಕ ತಿಳಿದುಬಂದಿದೆ. (ಏಜೆನ್ಸೀಸ್​)