ನವದೆಹಲಿ: ಫ್ರಾನ್ಸ್ ಜತೆಗಿನ ರಕ್ಷಣ ಒಪ್ಪಂದದ ಭಾಗವಾಗಿ ಐದು ರಫೇಲ್ ಜೆಟ್ ಯುದ್ಧ ವಿಮಾನಗಳು ಮೊದಲ ಹಂತದಲ್ಲಿ ಭಾರತಕ್ಕೆ ಬಂದಿವೆ. ಜುಲೈ 29ರಂದು ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ರಫೇಲ್ ವಿಮಾನಗಳು ಭೂಸ್ಪರ್ಶಿಸಿದವು.
ಜುಲೈ 27ರಂದು ಫ್ರಾನ್ಸ್ನ ಬೋರ್ಡೆಕ್ಸ್ ಬಳಿಯಿರುವ ಮೆರಿಗ್ನ್ಯಾಕ್ ವಾಯುನೆಲೆಯಿಂದ ಟೇಕಾಫ್ ಆದ ರಫೇಲ್ ಜೆಟ್ಗಳು ಪ್ರಯಾಣದ ನಡುವೆ ಯುಎಇನಲ್ಲಿ ಒಮ್ಮೆ ಮಾತ್ರ ತಂಗಿದ್ದವು. ಸುಮಾರು 7000 ಕಿ.ಮೀ ಕ್ರಮಿಸಿದ ರಫೇಲ್ ಜೆಟ್ಗಳು ಜುಲೈ 29ಕ್ಕೆ ಭಾರತಕ್ಕೆ ಬಂದಿಳಿದವು.
ಇದರ ನಡುವೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫ್ರಾನ್ಸ್ನಿಂದ ಭಾರತಕ್ಕೆ ಬಂದಿರುವ ಜೆಟ್ ವಿಮಾನಗಳಲ್ಲಿ ಒಂದಕ್ಕೆ ಪ್ರಯಾಣದ ವೇಳೆ 30 ಸಾವಿರ ಅಡಿ ಎತ್ತರದಲ್ಲಿ ಮಾರ್ಗ ಮಧ್ಯೆ ಇಂಧನ ತುಂಬುತ್ತಿರುವ ವಿಡಿಯೋ ಇದು ಎಂದು ಅಡಿಬರಹ ಬರೆದು ವಿಡಿಯೋ ಹರಿಬಿಡಲಾಗಿದೆ. ಅನೇಕ ಫೇಸ್ಬುಕ್ ಹಾಗೂ ಟ್ವಿಟರ್ನಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆದರೆ, ಇದು ಎಷ್ಟು ನಿಜಾಂಶವೆಂದು ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಬಹಿರಂಗವಾಗಿದೆ. ಸದ್ಯ ಹರಿದಾಡುತ್ತಿರುವ ವಿಡಿಯೋ ಎರಡು ವರ್ಷ ಹಳೆಯದು. ವಿಡಿಯೋವು ಬ್ರೆಜಿಲಿಯನ್ ಏರ್ ಪೋರ್ಸ್ಗೆ ಸಂಬಂಧಿಸಿದ್ದು. ಅಲ್ಲಿನ ವಾಯುನೆಲೆಯ ಎಫ್-5 ಯುದ್ಧ ವಿಮಾನವು ನೌಕಾಪಡೆಯ ಎ-4 ಯುದ್ಧ ವಿಮಾನಕ್ಕೆ ಮಾರ್ಗ ಮಧ್ಯೆ ಇಂಧನ ತುಂಬುತ್ತಿರುವ ವಿಡಿಯೋ ಇದಾಗಿದೆ. ಆ ವಿಡಿಯೋವನ್ನು ನೀವಿಲ್ಲಿ ಕಾಣಬಹುದಾಗಿದೆ.
ಗೂಗಲ್ ರಿವರ್ಸ್ ಸರ್ಚ್ ಇಂಜಿನ್ ಸಹಾಯದಿಂದ ಹುಡುಕಾಡಿದಾಗ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗಿವೆ. 2018ರ ಸೆಪ್ಟೆಂಬರ್ 28ರಂದು ಬ್ರೆಜಿಲಿಯನ್ ಏರ್ ಫೋರ್ಸ್ ಇದೇ ವಿಡಿಯೋವನ್ನು ಟ್ವೀಟ್ ಮಾಡಿದೆ. ಟ್ವೀಟ್ ಪೋರ್ಚುಗೀಸ್ ಭಾಷೆಯಲ್ಲಿದ್ದು, ಅದರ ಸಾರ ಹೀಗಿದೆ... ಬ್ರೆಜಿಲಿಯನ್ ಏರ್ ಫೋರ್ಸ್ನ ಎಫ್-5 ಜೆಟ್ ವಿಮಾನವು ಬ್ರೆಜಿಲಿಯನ್ ನೌಕಾಪಡೆಯ ಎ-4 ಜೆಟ್ ವಿಮಾನಕ್ಕೆ ಇಂಧನ ತುಂಬುವ ಕಾರ್ಯ ನಿರ್ವಹಿಸುತ್ತಿದೆ ಎಂದು ಬರೆಯಲಾಗಿದೆ.
ಅಂದಹಾಗೆ ರಫೇಲ್ ಜೆಟ್ ಭಾರತಕ್ಕೆ ಬರುವಾಗಲೂ ಸಹ ಮಾರ್ಗ ಮಧ್ಯೆ ಇಂಧನ ತುಂಬಿರುವುದು ಸತ್ಯ. ಆದರೆ, ಯಾವುದೇ ವಿಡಿಯೋ ಇಲ್ಲ. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಭಾರತೀಯ ವಾಯುಸೇನೆ 2020 ಜುಲೈ 29ರಂದು ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಆದರೆ, ವೈರಲ್ ಆಗಿರುವ ವಿಡಿಯೋ ರಫೇಲ್ ಜೆಟ್ ವಿಮಾನಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಎರಡು ವರ್ಷದ ಹಿಂದಿನದ್ದು. ಬ್ರೆಜಿಲ್ ವಾಯುಸೇನೆಗೆ ಸೇರಿದ್ದು ಎಂಬುದು ಫ್ಯಾಕ್ಟ್ಚೆಕ್ನಿಂದ ಬಹಿರಂಗವಾಗಿದೆ. (ಏಜೆನ್ಸೀಸ್)