ನವದೆಹಲಿ: ಕಾನ್ಪುರದ ದಿಬ್ರು ಗ್ರಾಮದಲ್ಲಿ ಎಂಟು ಪೊಲೀಸರನ್ನು ಹತ್ಯೆ ಮಾಡಿದ ಗ್ಯಾಂಗ್ಸ್ಟರ್ ವಿಕಾಸ್ ದುಬೆ ಮೇಲಿನ ದಿಢೀರ್ ಪೊಲೀಸ್ ಎನ್ಕೌಂಟರ್ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಕಾಸ್ ದುಬೆ ಹತ್ಯೆಯಲ್ಲಿ ಸರ್ಕಾರ ಕೈವಾಡವಿದೆಯೇ? ರಾಜ್ಯದಲ್ಲಿ ಪೊಲೀಸ್ ಹಾಗೂ ರಾಜಕೀಯ ವ್ಯಕ್ತಿಗಳ ಕ್ರಿಮಿನಲ್ ರಹಸ್ಯ ಬಹಿರಂಗವಾಗುತ್ತದೆ ಎಂಬ ಉದ್ದೇಶದಿಂದ ಎನ್ಕೌಂಟರ್ ಮಾಡಿಸಿದರೆ ಎಂಬಿತ್ಯಾದಿ ಪ್ರಶ್ನೆಗಳು ಕೇಳಿಬರುತ್ತಿವೆ.
ಎನ್ಕೌಂಟರ್ಗೂ ಮುನ್ನ ತಲೆಮರೆಸಿಕೊಂಡಿದ್ದ ದುಬೆಯನ್ನು ಮಧ್ಯಪ್ರದೇಶದ ಉಜ್ಜೈನ್ನಲ್ಲಿರುವ ಮಹಾಕಾಳ ದೇವಸ್ಥಾನದ ಹೊರಗಡೆ ಗುರುವಾರ ಬಂಧಿಸಲಾಗಿತ್ತು. ಆತನನ್ನು ಶುಕ್ರವಾರ ಬೆಳಗ್ಗೆ ಕಾನ್ಪುರಕ್ಕೆ ಕರೆತರುವಾಗ ಪೊಲೀಸ್ ವಾಹನ ಉರುಳಿಬಿದ್ದಿದೆ. ಪೊಲೀಸರ ಗನ್ ಕಸಿದು ಎಸ್ಕೇಪ್ ಆಗಲು ಯತ್ನಿಸಿದಾಗ ಪೊಲೀಸರು ಹಾಗೂ ದುಬೆ ನಡುವಿನ ಫೈರಿಂಗ್ನಲ್ಲಿ ದುಬೆ ಹತನಾದನು ಎಂಬುದು ಎಲ್ಲಡೆ ನಿನ್ನೆಯೇ ವರದಿಯಾಗಿದೆ.
ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗುತ್ತಿದೆ. ಅದರಲ್ಲಿ ವ್ಯಕ್ತಿಯೊಬ್ಬ ಯೂನಿಫಾರ್ಮ್ ಧರಿಸಿ, ತಲೆಗೆ ಕರ್ಚೀಫ್ ಸುತ್ತಿಕೊಂಡು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಾಲಿಗೆ ನಮಸ್ಕರಿಸುತ್ತಿದ್ದಾರೆ. ಆತನ ಹಣೆಗೆ ಯೋಗಿ ಅವರು ತಿಲಕ ಇಡುತ್ತಿದ್ದಾರೆ. ಫೋಟೋಗೆ ಅಡಿಬರಹ ನೀಡಲಾಗಿದ್ದು, ಸಿಎಂ ಯೋಗಿ ಬಳಿ ವಿಕಾಸ್ ದುಬೆ ಆಶೀರ್ವಾದ ಪಡೆಯುತ್ತಿರುವ ಹಳೆಯ ಪೋಟೋ ಇದು ಎಂದು ವಾದಿಸಿದ್ದಾರೆ. ಯೋಗಿ ಅವರು ಗೋರಕನಾಥ್ ದೇವಸ್ಥಾನದ ಸ್ವಾಮೀಜಿಯೂ ಹೌದು.
ಈ ಫೋಟೋವನ್ನು ರೆಯಾನ್ ಖಾನ್ ಎಂಬಾತ ಫೇಸ್ಬುಕ್ ಬಳಕೆದಾರ ಪೋಸ್ಟ್ ಮಾಡಿದ್ದು, ಯೋಗಿಯೊಂದಿಗೆ ವಿಕಾಸ್ ದುಬೆ ಇದ್ದು, ಇವರು ಕಳ್ಳ ಸಹೋದರರು ಎಂದು ಬರೆದುಕೊಂಡಿದ್ದಾರೆ. ಅನೇಕರು ಇದನ್ನು ನಂಬಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ, ವೈರಲ್ ಫೋಟೋ ಹಿಂದಿನ ಅಸಲಿ ಸತ್ಯ ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಬಹಿರಂಗವಾಗಿದೆ.
ಫೋಟೋವನ್ನು ಗೂಗಲ್ ರಿವರ್ಸ್ ಸರ್ಚ್ ಇಂಜಿನ್ನಲ್ಲಿ ಹುಡುಕಿದಾಗ ಇದೇ ಫೋಟೋಗಳನ್ನೊಳಗೊಂಡ ಅನೇಕ ವರದಿಗಳು 2018ರಲ್ಲಿ ಪ್ರಕಟವಾಗಿದೆ. ನ್ಯೂಸ್ ಮಾಧ್ಯಮಗಳ ಪ್ರಕಾರ ಫೋಟೋದಲ್ಲಿರುವ ವ್ಯಕ್ತಿ ಯೋಗಿ ಆದಿತ್ಯನಾಥ್ ತವರು ಗೋರಖ್ಪುರ್ ಸರ್ಕಲ್ ಆಫೀಸರ್ (ಸಿಒ) ಆಗಿ ನೇಮಕವಾದ ಪ್ರವೀಣ್ ಸಿಂಗ್ ಎಂಬುವರು. ಹೊಸದಾಗಿ ಆಯ್ಕೆಯಾದ್ದರಿಂದ ಯೋಗಿ ಆಶೀರ್ವಾದ ಪಡೆದುಕೊಂಡ ಅವರಿಗೆ ಯೋಗಿಯು ಸಹ ತಿಲಕವಿಟ್ಟು ಆಶೀರ್ವದಿಸಿದರು. ಇದು ಗೋರಖನಾಥ್ ದೇವಸ್ಥಾನದಲ್ಲಿ 2018ರಲ್ಲಿ ನಡೆದ ಗುರುಪೂರ್ಣಿಮಾ ಜಯಂತಿಯ ವೇಳೆ ಈ ಘಟನೆ ನಡೆದಿತ್ತು.
ಈ ಒಂದು ಘಟನೆ ಆ ಸಮಯದಲ್ಲಿ ಭಾರಿ ವಿವಾದವನ್ನು ಹುಟ್ಟು ಹಾಕಿತ್ತು. ಆದರೀಗ ಪ್ರವೀಣ್ ಫೋಟೋವನ್ನು ವಿಕಾಸ್ ದುಬೆ ಎಂದು ಹೇಳಲಾಗುತ್ತಿದೆ. ಬಿಜೆಪಿ ನಾಯಕರ ಹೆಸರು ವಿಕಾಸ್ ದುಬೆಯೊಟ್ಟಿಗೆ ತಳುಕು ಹಾಕಿ ಹರಿಬಿಡಲಾಗುತ್ತಿದೆ. ಆದರೆ, ಇದು ಸುಳ್ಳೆಂದು ಅನೇಕ ಫ್ಯಾಕ್ಟ್ಚೆಕಿಂಗ್ ವೆಬ್ಸೈಟ್ ಅಲ್ಲಗೆಳೆದಿವೆ. (ಏಜೆನ್ಸೀಸ್)