ನವದೆಹಲಿ: ಜಾಗತಿಕವಾಗಿ ಆರೋಗ್ಯ ಬಿಕ್ಕಟ್ಟು ಸೃಷ್ಟಿಸಿರುವ ಮಹಾಮಾರಿ ಕರೊನಾ ವೈರಸ್ ಕಾಣಿಸಿಕೊಂಡಾಗಿನಿಂದ ಮಾಸ್ಕ್ಗಳಿಗೆ ಹಿಂದೆಂದೂ ಕಾಣದಂತಹ ಬೇಡಿಕೆ ಸೃಷ್ಟಿಯಾಗಿದೆ. ಎಷ್ಟರಮಟ್ಟಿಗೆ ಅಂದರೆ ದೇಶದಲ್ಲಿ ಮಾಸ್ಕ್ಗಳಿಗೂ ಕೊರತೆಯಾಗಿದೆ. ಆದರೆ, ಸದ್ಯ ಸ್ಥಿತಿ ಸುಧಾರಿಸಿದ್ದು ರಸ್ತೆಗಳಲ್ಲಿಯೂ ಮಾಸ್ಕ್ಗಳ ಮಾರಾಟ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ಕರೊನಾ ಬಂದಾಗಿನಿಂದ ಫೇಕ್ ನ್ಯೂಸ್ಗಳಿಗೇನು ಕಮ್ಮಿಯಿಲ್ಲ. ಇದೀಗ ಮತ್ತೊಂದು ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಅರಿವಳಿಕೆ (ಅನಿಸ್ತೀಸಿಯ) ತುಂಬಿದ ಫೇಸ್ ಮಾಸ್ಕ್ಗಳನ್ನು ಅಪರಿಚಿತರು ಬಳಸುತ್ತಿದ್ದು, ಅದರಿಂದ ಪ್ರಜ್ಞೆ ತಪ್ಪಿಸಿ ದೋಚುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಸಂದೇಶ ಹರಿದಾಡುತ್ತಿದೆ.
ಈ ಸುದ್ದಿ ಅಸಲಿಯತ್ತು ತಿಳಿದುಕೊಳ್ಳಲು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಫ್ಯಾಕ್ಟ್ಚೆಕ್ ನಡೆಸಿದ್ದು, ಕೆಲ ಕ್ರಿಮಿನಲ್ಗಳು ರಾಸಾಯನಿಕಯುಕ್ತ ಮಾಸ್ಕ್ಗಳನ್ನು ಹಿಡಿದು ದರೋಡೆ ಮಾಡುತ್ತಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ, ಇದೊಂದು ಅಪಪ್ರಚಾರದ ಕುತಂತ್ರ ಎಂದು ಹೇಳಿದೆ.
ವೈರಲ್ ವಿಡಿಯೋ ಯಡವಟ್ಟು
ಪುನೀತ್ ಗೋಯಲ್ ಹೆಸರಿನ ಯೂಟ್ಯೂಬ್ ಚಾನಲ್ನಲ್ಲಿ ಟಿಕ್ಟಾಕ್ ವಿಡಿಯೋವೊಂದು ಅಪ್ಲೋಟ್ ಆಗಿದೆ. ವಿಡಿಯೋದಲ್ಲಿರುವಂತೆ ಮಹಿಳೆಯೊಬ್ಬರು ಕಾರಿನಲ್ಲಿ ಕುಳಿತ ವ್ಯಕ್ತಿಯೊಬ್ಬರಿಗೆ ಉಚಿತವಾಗಿ ಮಾಸ್ಕ್ ನೀಡುತ್ತಿದ್ದಾರೆ. ಕರೊನಾ ವೈರಸ್ನಿಂದ ರಕ್ಷಿಸಿಕೊಳ್ಳಲು ಜನರಿಗೆ ಮಾಸ್ಕ್ ವಿತರಣೆ ಮಾಡುತ್ತಿರುವುದಾಗಿ ಮಹಿಳೆ ಹೇಳಿದ್ದಾಳೆ. ಮಾಸ್ಕ್ ತೆಗೆದುಕೊಂಡ ವ್ಯಕ್ತಿ ಹಾಕಿಕೊಳ್ಳಬೇಕು ಎನ್ನುವಷ್ಟರಲ್ಲಿ ಅದರಲ್ಲಿ ಪ್ರಜ್ಞೆ ತಪ್ಪಿಸುವ ರಾಸಾಯನಿಕವಿದೆ. ದರೋಡೆ ಮಾಡಲು ಮಹಿಳೆ ಅದನ್ನು ಬಳಸುತ್ತಿದ್ದಾಳೆ ಎಂದು ಮತ್ತೊಬ್ಬ ವ್ಯಕ್ತಿ ಎಚ್ಚರಿಸುತ್ತಾನೆ. ವಿಡಿಯೋ ಕೆಳಗೆ ಅಪರಿಚಿತರಿಂದ ಯಾರು ಮಾಸ್ಕ್ ತೆಗೆದುಕೊಳ್ಳಬೇಡಿ ಎಚ್ಚವಹಿಸಿ ಎಂಬ ಅಡಿಬರವಿದೆ.
ಇದೇ ರೀತಿಯ ಅನೇಕ ವಿಡಿಯೋಗಳು ಎಚ್ಚರಿಕೆ ಸಂದೇಶಗಳೊಂದಿಗೆ ವಿವಿಧ ದೇಶಗಳಲ್ಲಿ ಹರಿದಾಡುತ್ತಿವೆ. ಆದರೆ, ಮೋಹ್ ಸಿಲ್ ಎಂಬ ಫೇಸ್ಬುಕ್ ಬಳಕೆದಾರ ಇಂಥದ್ದೆ ವಿಡಿಯೋ ಬಳಸಿಕೊಂಡು ಪೋಸ್ಟ್ ಮಾಡಿರುವ ಎಚ್ಚರಿಕೆಯ ಸಂದೇಶ ಇದೀಗ ಎಲ್ಲೆಡೆ ವೈರಲ್ ಆಗಿದೆ. ಕೆಲ ಮಂದಿ ಮಾಸ್ಕ್ ಹಿಡಿದು ಮನೆ ಮನೆಗೆ ಹೋಗುತ್ತಿದ್ದಾರೆ. ಸ್ಥಳೀಯ ಸರ್ಕಾರದ ಹೊಸ ಪ್ರಯತ್ನವಿದು ಎಂದು ಹೇಳುತ್ತಿದ್ದಾರೆ. ಇದು ನಿಮಗೆ ಸರಿಹೋಗುತ್ತಾ ನೋಡಿ ಎಂದು ರಾಸಾಯನಿಕ ಇರುವ ಮಾಸ್ಕ್ ಧರಿಸಲು ಪ್ರೇರೆಪಿಸಿ, ಬಳಿಕ ಪ್ರಜ್ಞೆ ತಪ್ಪಿಸಿ ಮನೆಯನ್ನು ದರೋಡೆ ಮಾಡುತ್ತಿದ್ದಾರೆ. ಹೀಗಾಗಿ ಅಪರಿಚಿತರಿಂದ ಮಾಸ್ಕ್ ತೆಗೆದುಕೊಳ್ಳಬೇಡಿ. ಕರೊನಾದಂತಹ ಸಂದಿಗ್ಧ ಸಮಯದಲ್ಲಿ ಜನರು ಹತಾಶರಾಗಿರುತ್ತಾರೆ. ಅಪರಾಧ ಪ್ರಕರಣಗಳು ಹೆಚ್ಚಾಗಲಿವೆ. ಆದಷ್ಟು ಎಚ್ಚರಿಕೆ ವಹಿಸಿ, ಸುರಕ್ಷಿತವಾಗಿರಿ ಸ್ನೇಹಿತರೆ ಎಂಬ ಸಂದೇಶ ಹರಿದಾಡುತ್ತಿದೆ.
ಆದರೆ, ಇದೆಲ್ಲಾ ಸುಳ್ಳು ಈ ಸಂಬಂಧ ಪೊಲೀಸ್ ಇಲಾಖೆ ಆಗಲಿ, ಗೃಹ ಸಚಿವಾಲಯ ಆಗಲಿ ಅಧವಾ ಇತರೆ ಕಾನೂನು ಜಾರಿ ಮಂಡಳಿಯಾಗಲಿ ಈ ರೀತಿಯ ಯಾವುದೇ ಸಲಹೆಯನ್ನು ನೀಡಿಲ್ಲ. ಭಾರತ ಮತ್ತು ವಿದೇಶಗಳಲ್ಲಿಯೂ ಈ ರೀತಿಯಾದ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್)