ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರದಲ್ಲಿ ಈವರೆಗೂ 27 ಮಂದಿ ಸಾವಿಗೀಡಾಗಿದ್ದು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರತನ್ ಲಾಲ್ ಹೆಸರಿನ ಪೇದೆ ಕೂಡ ಹತರಾಗಿದ್ದು, 56ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಶಹದಾರ ಡೆಪ್ಯುಟಿ ಪೊಲೀಸ್ ಆಯುಕ್ತ ಅಮಿತ್ ಶರ್ಮ ಕೂಡ ಒಬ್ಬರು.
ಆದರೆ, ಸಾಮಾಜಿಕ ಜಾಲತಾಣದಲ್ಲಿ ಡಿಸಿಪಿ ಅಮಿತ್ ಶರ್ಮಾ ಗಂಭೀರ ಗಾಯದಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆಂಬ ಸಂದೇಶ ಹರಿದಾಡುತ್ತಿದೆ. ಫೇಸ್ಬುಕ್ ಬಳಕೆದಾರ ಸುಭಾಶ್ ಕುಮಾರ್ ಎಂಬಾತ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದು, ದೆಹಲಿಗೆ ತುಂಬಾ ದುಃಖದ ನ್ಯೂಸ್. ಜಿಹಾದಿಗಳ ಕಲ್ಲು ತೂರಾಟಕ್ಕೆ ಪೇದೆ ರತನ್ ಲಾಲ್ ಯಾದವ್ ಬಲಿಯಾದ ಬಳಿಕ ಡಿಸಿಪಿ ಅಮಿತ್ ಶರ್ಮಾ ಕೂಡ ಗುಂಡೇಟಿನಿಂದ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆಂದು ಬರೆದುಕೊಂಡಿದ್ದಾರೆ. ಇದು ಸಾಕಷ್ಟು ಶೇರ್ ಕೂಡ ಆಗಿದೆ.
ಆದರೆ, ಇದು ಸುಳ್ಳು ಸುದ್ದಿಯಾಗಿದ್ದು ಮಂಗಳವಾರ ಬೆಳಗೆಯಷ್ಟೇ ಡಿಸಿಪಿ ಶರ್ಮಾ ಅವರು ಸುರಕ್ಷಿತವಾಗಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ, ಬಿಜೆಪಿ ಸಂಸದ ಗೌತಮ್ ಗಂಭೀರ್ ಕೂಡ ಮ್ಯಾಕ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಬಳಿಕ ಶರ್ಮಾ ಅವರನ್ನು ಐಸಿಯುನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದರು.
ಅಲ್ಲಿಗೆ ಸ್ಪಷ್ಟವಾಗುವುದೇನೆಂದರೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದು ಸುಳ್ಳು ಸುದ್ದಿಯಾಗಿದ್ದು, ಮಾಧ್ಯಮ ವರದಿಯ ಪ್ರಕಾರ ಶರ್ಮಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)