ನ್ಯೂಸ್

ವಧುವಿನ ಕೆನ್ನೆಗೆ ಚುಂಬಿಸುತ್ತಿರುವುದು ಮೌಲ್ವಿಯಲ್ಲ: ವೈರಲ್​ ವಿಡಿಯೋ ಹಿಂದಿನ ಸತ್ಯಾಂಶ ಇಲ್ಲಿದೆ!

ಹೈದರಾಬಾದ್​: ಆಗಸ್ಟ್​ 19ರಂದು ಫೇಸ್​ಬುಕ್​ ಬಳಕೆದಾರರೊಬ್ಬರು ಅಪ್​ಲೋಡ್​ ಮಾಡಿದ ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬ ವಧುವಿನ ಕೆನ್ನೆಗೆ ಚುಂಬಿಸುತ್ತಿರುವ ದೃಶ್ಯವಿದೆ. ವಿಡಿಯೋ ಕುರಿತು ಮೌಲ್ವಿ ಒಬ್ಬರು ವಧುವಿಗೆ ಮುತ್ತಿಟ್ಟರೆಂದು ಅಡಿಬರಹ ಬರೆದು ವೈರಲ್​ ಮಾಡಿದ್ದಾರೆ. ಆದರೆ, ಇದು ಅಕ್ಷರಶಃ ಸುಳ್ಳು ಎಂಬುದು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ.

ಇದೇ ವಿಡಿಯೋವನ್ನು ಆಗಸ್ಟ್​ 23ರಂದು ಎಬಿಪಿ ನ್ಯೂಸ್ ಜರ್ನಲಿಸ್ಟ್​ ಅಸ್ಥ ಕೌಸಿಕ್​ ಎಂಬಾತ​ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದರು. ವಧುವಿನ ತಾಯಿ ಮತ್ತು ಫ್ರೆಂಡ್ಸ್ ಸಹ ಈ ರೀತಿಯಲ್ಲಿ ತಮ್ಮ ಪ್ರೀತಿಯನ್ನು ತೋರಿಸಿಕೊಳ್ಳುವುದಿಲ್ಲ. ಹಿರಿಯರು ಆಶೀರ್ವಾದದ ಮೂಲಕ ತಮ್ಮ ಪ್ರೀತಿಯನ್ನು ತೋರಿಸುತ್ತಾರೆಂದು ವಿಡಿಯೋ ಕುರಿತು ಬರೆದುಕೊಂಡಿದ್ದಾರೆ. ಅದೇ ಟ್ವೀಟ್​ 2100 ಕ್ಕೂ ಹೆಚ್ಚು ಬಾರಿ ರೀಟ್ವೀಟ್​ ಆಗಿದ್ದು, ವಿಡಿಯೋವನ್ನು 93 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಸುಮಾರು 7 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿವೆ. ​

ಆಗಸ್ಟ್​ 24ರಂದು ಇದೇ ವಿಡಿಯೋವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ಜಂಟಿ ಕಾರ್ಯದರ್ಶಿ​ ಅನಿಮಾ ಸೋಂಕಾ ಸಹ ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಕುರಾನ್​ನಲ್ಲಿ ಏನನ್ನಬೇಕೋ ಕಾಣೆ? ಮೌಲ್ವಿಯೊಬ್ಬರು ಈ ರೀತಿಯ ವಿಶೇಷ ಆಶೀರ್ವಾದ ನೀಡುವುದು ಸರಿಯೇ? ಪ್ರಖ್ಯಾತ ಟಿವಿ ಕಾರ್ಯಕ್ರಮ ಸತ್ಯಮೇವ ಜಯತೆ ಕಾರ್ಯಕ್ರಮದಲ್ಲೂ ಮಿಸ್ಟರ್​ ಜ್ಯಾತ್ಯಾತೀತ ಅಮೀರ್​ ಖಾನ್​ ಸಹ ಇಸ್ಲಾಮಿಕ್​ ಸಮಾಜದಲ್ಲಿರುವ ಸಾಮಾಜಿಕ ವಿರೋಧಿ ಆಚರಣೆಗಳನ್ನು ತೋರಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಫ್ಯಾಕ್ಟ್​ಚೆಕ್​ನಲ್ಲಿ ಅಸಲಿಯತ್ತು ಬಹಿರಂಗ!

ಕೆಲವರು ಹೇಳುವಂತೆ ಹಾಗೂ ಬಹುತೇಕರು ನಂಬಿರುವಂತೆ ವೈರಲ್​ ವಿಡಿಯೋದಲ್ಲಿರುವುದು ಮೌಲ್ವಿಯಲ್ಲ ಎಂಬುದು ನ್ಯೂಸ್​ ಮೀಟರ್​ ವೆಬ್​ಸೈಟ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಬಹಿರಂಗವಾಗಿದೆ. ವಧುವಿನ ಕೆನ್ನೆಗೆ ಮುತ್ತಿಡುತ್ತಿರುವ ವ್ಯಕ್ತಿ ಆಕೆಯ ತಂದೆ ಎನ್ನುವುದೇ ಸತ್ಯ. ಆಗಸ್ಟ್​ 19ರಂದು ಇಸ್ಲಮಾಬಾದ್​ ಸ್ಟೈಲ್​ ಐಕಾನ್​ ಎಂಬ ಫೇಸ್​ಬುಕ್​ ಪೇಜ್​ನಲ್ಲಿ ಇದೇ ವಿಡಿಯೋವನ್ನು ಅಪ್​ಲೋಡ್​ ಮಾಡಲಾಗಿದೆ. ನನ್ನ ಮಗಳು ಹೊಸ ಜೀವನವನ್ನು ಪ್ರಾರಂಭಿಸುತ್ತಿದ್ದಾಳೆ. ಅವಳ ಪರವಾಗಿ ಆಕೆಯ ತಂದೆ ಯಾವಾಗಲು ಜತೆಗಿರುತ್ತಾನೆಂದು ಅವಳಿಗೆ ತಿಳಿಯಬೇಕೆಂದು ಬಯಸುತ್ತೇನೆಂದು ವಿಡಿಯೋ ಕುರಿತು ಬರೆಯಲಾಗಿದೆ.

ವಧುವಿನ ಫೋಟೋಗ್ರಫಿ ಮಾಡಿದ ಪಾಕಿಸ್ತಾನ ಮೂಲದ zamalsamanphotography ಎಂಬ ಕಂಪನಿಯು ತನ್ನ ಇನ್​ಸ್ಟಾಗ್ರಾಂ​ ಪೇಜ್​ನಲ್ಲಿಯೂ ಇದೇ ವಿಡಿಯೋವನ್ನು ಪೋಸ್ಟ್​ ಮಾಡಿದೆ.​​ ಆದರೂ ವಿಡಿಯೋ ಮಾತ್ರ ತಪ್ಪು ಸಂದೇಶದೊಂದಿಗೆ ವೈರಲ್​ ಆಗಿದ್ದು, ಇದೀಗ ಇನ್​ಸ್ಟಾಗ್ರಾಂ ಪೇಜ್​ನಿಂದ ವಿಡಿಯೋ ತೆಗೆಯುವಂತೆ ಒತ್ತಾಯಿಸಲಾಗುತ್ತಿದೆ. ಅಲ್ಲದೆ, ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋ ಕುರಿತು ಹರಿದಾಡುತ್ತಿರುವ ಸುದ್ದಿ ಸುಳ್ಳೆಂದು ಸಹ ಇನ್​ಸ್ಟಾಗ್ರಾಂನಲ್ಲಿ ಪೇಜ್​ನಲ್ಲಿ ಸ್ಪಷ್ಟನೆಯನ್ನು ನೀಡಲಾಗಿದೆ.

ಇನ್ನು ವಿಡಿಯೋ ಪೋಸ್ಟ್​ ಮಾಡಿದ ಫೇಸ್​ಬುಕ್​ ಬಳಕೆದಾರನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಇದೀಗ ವಿಡಿಯೋವನ್ನು ಡಿಲೀಟ್​ ಮಾಡಿದ್ದಾರೆ. ಅಲ್ಲದೆ, ತನ್ನ ತಪ್ಪಿಗೆ ಕ್ಷಮೆಯನ್ನು ಯಾಚಿಸಿದ್ದಾರೆ. ವಧುವಿನ ತಂದೆ ಎಂದು ನನಗೆ ತಿಳಿದಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ವಿಡಿಯೋ ಅದಾಗಲೇ ವೈರಲ್​ ಆಗಿ, 251ಕ್ಕೂ ಹೆಚ್ಚು ಬಾರಿ ಶೇರ್​ ಆಗಿ, 450 ಕ್ಕೂ ಹೆಚ್ಚು ಕಮೆಂಟ್​ಗಳನ್ನು ಪಡೆದುಕೊಂಡಿದೆ. ಆದರೆ, ಸುದ್ದಿ ನಕಲಿ ಎಂಬುದು ಫ್ಯಾಕ್ಟ್​ಚೆಕ್​ ಬಹಿರಂಗ ಪಡಿಸಿದೆ. (ಏಜೆನ್ಸೀಸ್​)