ನ್ಯೂಸ್

FACT CHECK |ನಿಖಿಲ್​ ಕುಮಾರಸ್ವಾಮಿ ವಿವಾಹದಲ್ಲಿ ಸಿಎಂ ಯಡಿಯೂರಪ್ಪ ಭಾಗವಹಿಸಿದ್ದರೆ? ಫ್ಯಾಕ್ಟ್​ಚೆಕ್​ನಲ್ಲಿ ನೈಜ ಮಾಹಿತಿ

kumarvrl

ಬೆಂಗಳೂರು: ಲಾಕ್​ಡೌನ್​ ನಡುವೆ ನಡೆದ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರ ಪುತ್ರನ ವಿವಾಹಕ್ಕೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಪಾಲ್ಗೊಂಡಿದ್ದರು ಎನ್ನುವ ಪೋಸ್ಟ್​ಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ.

ಏ.17ರ ಶುಕ್ರವಾರ ಬಿಡದಿ ಬಳಿಯ ಕೇತಿಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ನಡೆದ ವಿವಾಹಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತೆರಳಿದ್ದರು ಎನ್ನುವ ಶೀರ್ಷಿಕೆ ಬರೆದು ಫೋಟೋ ಅಪ್​ಲೋಡ್​ ಮಾಡಲಾಗಿತ್ತು. ಈ ಪೋಸ್ಟ್​ ಅನ್ನು ಹಲವು ಮಂದಿ ಹಂಚಿಕೊಂಡಿದ್ದರು. ಅಲ್ಲದೆ ಕೆಲವರು ಪ್ರತ್ರಿಕ್ರಿಯೆ ವ್ಯಕ್ತಪಡಿಸಿದ್ದರು.

ಬರಹಗಾರ, ರಾಜಕೀಯ ವಿಶ್ಲೇಷಕ ಎಂದು ಹೇಳಿಕೊಳ್ಳುವ ಟ್ವಿಟರ್ ಬಳಕೆದಾರ “ಪಿಂಕಿ ಚೌಬೆ” ಎಂಬುವವರು ಮಾಜಿ ಸಿಎಂ ಪುತ್ರ ನಿಖಿಲ್​ ಕುಮಾರ್​ ಸ್ವಾಮಿ ಅವರ ಮದುವೆಗೆ ಸಿಎಂ ಯಡಿಯೂರಪ್ಪ ತೆರಳಿದ್ದರು ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದರು. ಇವರ ಈ ಪೋಸ್ಟ್​ ಅನ್ನು 3,300ಕ್ಕೂ ಅಧಿಕ ಮಂದಿ ಬಳಕೆದಾರರು ಇಷ್ಟಪಟ್ಟಿದ್ದಾರೆ. ಅಲ್ಲದೆ ಸಾವಿರಕ್ಕೂ ಹೆಚ್ಚು ಮಂದಿ ರಿಟ್ವೀಟ್​ ಮಾಡಿದ್ದಾರೆ.

ಬಡವರಿಗೊಂದು ಹಾಗೂ ಶ್ರೀಮಂತರಿಗೊಂದು ನ್ಯಾಯ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

ವೈರಲ್​ ಆದ ಈ ಫೋಟೋ ಹಳೆಯದು. ನಿಖಿಲ್​ ಕುಮಾರಸ್ವಾಮಿ ಅವರ ವಿವಾಹಕ್ಕೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ತೆರಳಿಲ್ಲ ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಮಾಹಿತಿ ಹರಡಿದ್ದಾರೆ ಎಂಬುದು ಫ್ಯಾಕ್ಟ್​ಚೆಕ್​ನಿಂದ ಖಚಿತವಾಗಿದೆ.

ಇಂಡಿಯಾ ಟುಡೇ ಆ್ಯಂಟಿ ಫೇಕ್​ ನ್ಯೂಸ್​ ವಾರ್​ರೂಮ್​ (ಎಎಫ್‌ಡಬ್ಲ್ಯೂಎ) ವೈರಲ್​ ಆದ ಫೋಟೋ ನಿಖಿಲ್​ ಕುಮಾರಸ್ವಾಮಿ ಅವರ ನಿಶ್ಚಿತಾರ್ಥದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಅವರು ಭಾಗವಹಿಸಿದ್ದರು. ನಿಶ್ಚಿತಾರ್ಥ ನಡೆದ ವೇಳೆ ಲಾಕ್​ಡೌನ್​ ಜಾರಿಯಲ್ಲಿರಲಿಲ್ಲ ಎಂಬುದನ್ನು ಪತ್ತೆ ಮಾಡಿದೆ.

2020ರ ಫೆಬ್ರವರಿ 10 ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ ಹೋಟೆಲ್​ನಲ್ಲಿ ನಿಶ್ಚಿತಾರ್ಥ ನಡೆದಿತ್ತು. ಆಗ ಸಿಎಂ ಯಡಿಯೂರಪ್ಪ ಸೇರಿದಂತೆ ಅವರ ಸಂಪುಟದ ಸಚಿವರು ಪಾಲ್ಗೊಂಡಿದ್ದರು. ಆ ಫೋಟೋವನ್ನು ಈಗ ಅಪ್​ಲೋಡ್​ ಮಾಡಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. (ಏಜೆನ್ಸೀಸ್​)