ಬೆಂಗಳೂರು: ಮೇಲ್ಮನೆ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿಗೆ ಪ್ರೋಟೋಕಾಲ್ ಪ್ರಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಡಿಪಿಎಆರ್) ಸೌಲಭ್ಯ ಕಲ್ಪಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೋಸ್ಕರ ಆಗಲೀ ನಾರಾಯಣಸ್ವಾಮಿ ಅವರಿಗೋಸ್ಕರ ನಿಯಮ ಇಲ್ಲ. ಮೇಲ್ಮನೆ ವಿಪಕ್ಷ ನಾಯಕರಿಗೆ ಏನು ಕೊಡಬೇಕು ಅದನ್ನು ಕೊಡುತ್ತಾರೆ ಎಂದು ತಿಳಿಸಿದರು.
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರಕ್ಕೆ ರಾಜಮನೆತನದ ವಿರೋಧ ಕುರಿತ ಪ್ರಶ್ನೆಗೆ, ಪ್ರಮೋದಾ ದೇವಿ ಒಡೆಯರ್ ಅವರ ಹೇಳಿಕೆ ಮಾಧ್ಯಮದಲ್ಲಿ ನೋಡಿದ್ದೇವೆ. ಪ್ರಾಧಿಕಾರ ಮಾಡುವ ಉದ್ದೇಶ ಅಲ್ಲಿ ಸಮರ್ಪಕವಾಗಿ ಚೆನ್ನಾಗಿ ಆಡಳಿತ ನಡೆಯಲಿ ಎಂಬುದೇ ಆಗಿದೆ. ಕೆಲವು ದೇವಸ್ಥಾನಗಳಲ್ಲಿ ಈ ರೀತಿ ವ್ಯವಸ್ಥೆ ಇವೆ. ದೇವಸ್ಥಾನ ಅಭಿವೃದ್ಧಿ, ಭಕ್ತರಿಗೆ ಸೌಲಭ್ಯ ಕಲ್ಪಿಸಲು ಪ್ರಾಧಿಕಾರ ಇದ್ದರೆ ಉತ್ತಮ. ಅದೇ ರೀತಿ ಚಾಮುಂಡಿಬೆಟ್ಟ ವಿಚಾರದಲ್ಲೂ ಮಾಡಲಾಗಿತ್ತು ಈಗ ಅವರು ಆಕ್ಷೇಪ ಮಾಡಿದ್ದಾರೆ. ಮುಂದೆ ಕಾನೂನಾತ್ಮಕವಾಗಿ ಏನಾಗುತ್ತದೆಯೋ ನೋಡೋಣ ಎಂದು ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ಸರ್ಕಾರದ ಮೇಲೆ ಒತ್ತಡವಿದೆ. ಸರ್ಕಾರ ಶೀಘ್ರದಲ್ಲೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ. ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಬೇಕು ಅಂತ ನಾವು ಹೇಳಿದ್ದೇವೆ ಎಂದರು.
ಮುಡಾ ವಿಚಾರದಲ್ಲಿ ರಾಜ್ಯಪಾಲರು ತಮ್ಮ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಎಂಬ ನಂಬಿಕೆ ಇದೆ. ನಾವು ಈಗಾಗಲೇ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿ, ನೀವು ಮಾಡಿರುವುದು ತಪ್ಪು. ನೀಡಿರುವ ನೋಟಿಸ್ ಹಿಂಪಡೆಯಿರಿ ಎಂದು ಕ್ಯಾಬಿನೆಟ್‌ನಲ್ಲಿ ನಿರ್ಧರಿಸಿ ಸಲಹೆ ನೀಡಿದ್ದೇವೆ. ಪ್ರಾಸಿಕ್ಯೂಷನ್‌ಗೂ ಅನುಮತಿ ನೀಡಬಾರದು ಎಂದೂ ಹೇಳಿದ್ದೇವೆ. ಅದರ ಬಗ್ಗೆ ಇನ್ನೂ ಏನು ನಿರ್ಣಯ ರಾಜ್ಯಪಾಲರು ತೆಗೆದುಕೊಂಡಿಲ್ಲ. ನಾವೂ ಕಾದು ನೋಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.