ತ್ರಿಶೂರ್: ರಸ್ತೆಯಲ್ಲಿ ಸಂಚರಿಸುವ ವೇಳೆ ಏಕಾಏಕಿ ಆನೆ ಎದುರಾದರೆ ಏನಾಗಬಹುದು, ಇಂತಹದ್ದೇ ಘಟನೆಯೊಂದು ಕೇರಳದಲ್ಲಿ ನಡೆದಿದೆ.
ರಸ್ತೆಯಲ್ಲಿ ಬೈಕ್ ಸವಾರ ತನ್ನ ಪಾಡಿಗೆ ತಾನು ಹೋಗುತ್ತಿದ್ದ, ಇದೇ ವೇಳೆ ತನ್ನ ಎದುರೇ ಬೃಹತ್ ಗಾತ್ರದ ಆನೆ ಬಂದೇ ಬಿಡ್ತು. ಬೆಚ್ಚಿ ಬಿದ್ದ ಸವಾರ ಮಾತ್ರ ಏನು ಮಾಡಬೇಕೆಂದು ತೋಚಲೇ ಇಲ್ಲ.
ಕೆಲ ಕ್ಷಣದವರೆಗೆ ಎದುರು ಬದರು ಹಾಗೆ ನಿಂತಿ ಆನೆ ಹಾಗೂ ಬೈಕ್ ಸವಾರ ಮುಂದೇನಾಗಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದ್ದಂತೂ ಸತ್ಯ. ಅದೃಷ್ಟವಶಾತ್ ಆನೆಗೆ ಕೋಪ ಬಂದಿರಲಿಲ್ಲ, ಇತ್ತ ಈ ಸವಾರನ ಹಣೆಬರಹವೂ ಚೆನ್ನಾಗಿತ್ತು. ಮುಂದಾಗಬಹುದಾದ ಅನಾಹುತವೊಂದು ತಪ್ಪಿತು.
ಆನೆಯನ್ನು ನೋಡಿ ಬೆಚ್ಚಿ ಬಿದ್ದ ಸವಾರ ಮಾತ್ರ ಅಲುಗಾಡದೇ ಅಲ್ಲೇ ನಿಂತಿದ್ದ, ಆನೆಯೂ ಅವನನ್ನು ಕೆಲಕಾಲ ದಿಟ್ಟಿಸಿತು. ನಂತರ ತನ್ನ ಪಾಡಿಗೆ ಹೋಯಿತು.
ಅಷ್ಟಕ್ಕೂ ಈ ಘಟನೆ ನಡೆದಿದ್ದು ಕೇರಳದ ತ್ರಿಶೂರ್ ಜಿಲ್ಲೆಯ ಅಥಿರ್ಪಲಿ-ವಲಪಾರಿ ಅರಣ್ಯ ಪ್ರದೇಶದಲ್ಲಿ ಹಾದುಹೋಗುವ ರಸ್ತೆಯಲ್ಲಿ ಕೇರಳ ಜಿಲ್ಲೆಯ ಮಧ್ಯಭಾಗಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಅಂದಹಾಗೆ ಈ ದೃಶ್ಯವನ್ನು ಅಣತಿ ದೂರದಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. (ಏಜೆನ್ಸೀಸ್)