ನ್ಯೂಸ್

ಉತ್ತರ ಪ್ರದೇಶದಲ್ಲಿ ಕುತೂಹಲ ಮೂಡಿಸಿದ ಬೆಳವಣಿಗೆ: ಮೋದಿ ಆಪ್ತ ಬಿಜೆಪಿ ಉಪಾಧ್ಯಕ್ಷ

ಲಖನೌ: ಪ್ರಧಾನಿ ನರೇಂದ್ರ ಮೋದಿ ಆಪ್ತ, ಪ್ರಧಾನಿ ಕಾರ್ಯಾಲಯದಲ್ಲಿ ಉನ್ನತಾಧಿಕಾರಿಯಾಗಿದ್ದ ಅರವಿಂದ ಕುಮಾರ್​ ಶರ್ಮರನ್ನು ಉತ್ತರ ಪ್ರದೇಶ ಬಿಜೆಪಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಶರ್ಮರಿಗೆ ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ಬಗ್ಗೆ ಮಾತುಗಳಿದ್ದವು. ಸಿಎಂ ಯೋಗಿ ಆದಿತ್ಯನಾಥ ದೆಹಲಿ ಪ್ರವಾಸದ ಕೆಲ ದಿನಗಳ ನಂತರ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.

2001ರಲ್ಲಿ ನರೇಂದ್ರ ಮೋದಿಯವರು ಗುಜರಾತ್​ ಮುಖ್ಯಮಂತ್ರಿಯಾದ ದಿನಗಳಿಂದ ಅವರೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶರ್ಮರನ್ನು 2014ರಲ್ಲಿ ದೆಹಲಿಗೆ ಕರೆಸಿಕೊಳ್ಳಲಾಗಿತ್ತು. 2020ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದ ಶರ್ಮ, ಮೋದಿ ಆಶಯದಂತೆ ಉತ್ತರ ಪ್ರದೇಶ ವಿಧಾನಪರಿಷತ್​ ಸದಸ್ಯರಾಗಿ ತೆರಳಿದ್ದರು. ಕರೊನಾ ಎರಡನೇ ಅಲೆ ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಖುದ್ದು ಪ್ರಧಾನಿ ಮೋದಿ ಅವರು ಶರ್ಮರನ್ನು ತಮ್ಮ ಲೋಕಸಭೆ ಕ್ಷೇತ್ರ ವಾರಾಣಾಸಿಯಲ್ಲಿ ಕರೊನಾ ನಿರ್ವಹಣೆ ಉಸ್ತುವಾರಿ ವಹಿಸಲು ಕಳುಹಿಸಿದ್ದರು. ಮೂಲತ@ ಪೂರ್ವ ಉತ್ತರ ಪ್ರದೇಶ ಮೌ ಜಿಲ್ಲೆಗೆ ಸೇರಿರುವ ಅರವಿಂದ ಶರ್ಮ, ಭೂಮಿಹಾರ್​ ಬ್ರಾಹ್ಮಣ ಸಮುದಾಯದವರು. ಸಿಎಂ ಯೋಗಿ ಆದಿತ್ಯನಾಥ ಬಗ್ಗೆ ರಾಜ್ಯದ ಬ್ರಾಹ್ಮಣ ವರ್ಗಕ್ಕೆ ತೀವ್ರ ಅಸಮಾಧಾನವಿದೆ ಎಂಬ ವರದಿಗಳಿರುವ ಹಿನ್ನೆಲೆಯಲ್ಲಿ ಅವರನ್ನು ಸಮಾಧಾನಪಡಿಸಲೆಂದೇ ಶರ್ಮರಿಗೆ ಉನ್ನತ ಹುದ್ದೆ ನೀಡಲಾಗಿದೆ.

ಇದೇ ಕಾರಣಕ್ಕೆ ಕಾಂಗ್ರೆಸ್​ನಲ್ಲಿದ್ದ, ಬ್ರಾಹ್ಮಣ ಸಮುದಾಯದ ಜಿತಿನ್​ ಪ್ರಸಾದ್​ ಬಿಜೆಪಿ ಸೇರ್ಪಡೆಯೂ ಮಹತ್ವ ಪಡೆದುಕೊಂಡಿತ್ತು. "ನನ್ನನ್ನು ರಾಜ್ಯ ಟಕದ ಉಪಾಧ್ಯಕ್ಷನನ್ನಾಗಿ ಮಾಡಿದ ಕೇಂದ್ರ ಮತ್ತು ರಾಜ್ಯ ನಾಯಕತ್ವಕ್ಕೆ ಧನ್ಯವಾದಗಳು. ಹಿರಿಯದ ಮಾರ್ಗದರ್ಶನದಲ್ಲಿ, ಸ್ನೇಹಿತರ ಸಹಕಾರದೊಂದಿಗೆ ಸಮಾಜ, ರಾಜ್ಯ ಹಾಗೂ ದೇಶ ಸೇವೆ ಮುಂದುವರಿಸಲಿದ್ದೇನೆ ಎಂದು ಶರ್ಮ ಸಂತಸ ವ್ಯಕ್ತಪಡಿಸಿದ್ದಾರೆ.