ನ್ಯೂಸ್

ವಿದ್ಯಾರ್ಥಿಗಳಿಗೆ ನೇತ್ರ ಪರೀಕ್ಷೆ ಕಡ್ಡಾಯ

ರಮೇಶ್​ ಕುಮಾರ್​​ ಬಿ ಎಡಮೋಳೆ

ಕೋಲಾರ: ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ದೃಷ್ಟಿ ದೋಷ ನಿವಾರಿಸುವ ನಿಟ್ಟಿನಲ್ಲಿ ಬರುವ ಶೈಕ್ಷಣಿಕ ವರ್ಷದಲ್ಲಿ ಎಲ್ಲ ಸರ್ಕಾರಿ ಶಾಲೆಗಳ 8ನೇ ತರಗತಿ ಮಕ್ಕಳಿಗೆ ಕಡ್ಡಾಯವಾಗಿ ನೇತ್ರ ಪರೀಕ್ಷೆ ಮಾಡಿಸಲಾಗುವುದು ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಕೆಲ ಮಕ್ಕಳು ಕೀಳರಿಮೆಯಿಂದ ಸಮಸ್ಯೆ ಹೇಳಿಕೊಳ್ಳದೆ ತೊಂದರೆ ಅನುಭವಿಸುತ್ತಿದ್ದಾರೆ. 8ನೇ ತರಗತಿ ಮಕ್ಕಳಿಗೆ ಆಯಾ ಜಿಲ್ಲೆಗಳಲ್ಲಿ ಉಚಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಕಲ್ಪಿಸಿದಲ್ಲಿ ಮಕ್ಕಳು ದೃಷ್ಟಿ ದೋಷದಿಂದ ಮುಕ್ತರಾಗುತ್ತಾರೆ. ಮುಂದಿನ ವರ್ಷ ಅವಶ್ಯಕತೆ ಇರುವ ಜಿಲ್ಲೆಗಳಲ್ಲಿ ಮಕ್ಕಳಿಗೆ ಕಣ್ಣಿನ ತಪಾಸಣೆ ಮಾಡಿಸಲು ಆಯಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೆ ಪ್ರಯತ್ನ ನಡೆದಿದ್ದು, ತಾಲೂಕು ವಲಯದಲ್ಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿಸಲು ಚಿಂತನೆ ನಡೆದಿದೆ. ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಕಾಯ್ದೆಗೆ ಅನುಮೋದನೆ ಪಡೆಯಲಾಗುವುದು ಎಂದರು. ಮಕ್ಕಳಲ್ಲಿನ ಗೊಂದಲ, ಆತಂಕ ನಿವಾರಿಸಲು ನುರಿತವರ ಮಾರ್ಗದರ್ಶವಿರುವ ವಿಡಿಯೋ ಸಿದ್ಧಪಡಿಸಲಾಗುತ್ತಿದ್ದು, 8 ದಿನಗಳಲ್ಲಿ ಈ ವಿಡಿಯೋವನ್ನು ಎಲ್ಲ ಶಾಲೆಗಳಿಗೆ ಒದಗಿಸಲಾಗುವುದು. ಈ ವರ್ಷದಿಂದ ಮಕ್ಕಳಿಗೆ ಶಾಲೆ ಆರಂಭದ ದಿನವೇ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲು ಪ್ರಕ್ರಿಯೆ ನಡೆದಿದೆ ಎಂದು ಸಚಿವರು ಮಾಹಿತಿ ನೀಡಿದರು.