ನ್ಯೂಸ್

ಮಕ್ಕಳ ಕಣ್ಣಿನ ಸಮಸ್ಯೆ ದೊಡ್ಡದಾಗಲು ಬಿಡಬೇಡಿ: ವಿಜಯವಾಣಿ ಕ್ಲಬ್​ಹೌಸ್​ನಲ್ಲಿ ಡಾ.ಭುಜಂಗ ಶೆಟ್ಟಿ

ಬೆಂಗಳೂರು: ಮಕ್ಕಳ ಕಣ್ಣುಗಳ ಮುತುವರ್ಜಿಯನ್ನು ದೊಡ್ಡವರೇ ವಹಿಸಿಕೊಳ್ಳಬೇಕು. ಕಣ್ಣಿಗೆ ಸಮಸ್ಯೆ ಉಂಟಾದಾಗ ಸುಲಭವಾಗಿ ಕಾಣುತ್ತದೆ. ಮಕ್ಕಳಲ್ಲಿ ಮೆಳ್ಳಗಣ್ಣು ಮುಂತಾದ ಸಮಸ್ಯೆ ಬಂದ ತಕ್ಷಣ ವೈದ್ಯರಿಗೆ ತೋರಿಸಬೇಕು. ಆಗ ಅವರು ಸಮಸ್ಯೆಯನ್ನು ಕಂಡು ಹಿಡಿದು ಸರಿಪಡಿಸಬಹುದು. ಬದಲಿಗೆ ನಿರ್ಲಕ್ಷಿಸಿದರೆ ಸರಳವಾಗಿ ಸರಿಪಡಿಸಬಹುದಾದ ಸಮಸ್ಯೆ ಗಂಭೀರವಾಗಿಬಿಡುತ್ತೆ ಎಂದು ನೇತ್ರತಜ್ಞ ಡಾ. ಭುಜಂಗ ಶೆಟ್ಟಿ ಹೇಳಿದ್ದಾರೆ.

ನಾಳೆಯ 'ವಿಶ್ವ ದೃಷ್ಟಿ ದಿನ'ದ ಹಿನ್ನೆಲೆಯಲ್ಲಿ ಇಂದು ವಿಜಯವಾಣಿ ಕ್ಲಬ್​ಹೌಸ್​ನಲ್ಲಿ ಮಾತನಾಡುತ್ತಿರುವ ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ ಅವರು ಭಾರತದಲ್ಲಿ ಮಕ್ಕಳಲ್ಲಿ ಕಾಣುವ ಮೆಳ್ಳಗಣ್ಣಿನ ಸಮಸ್ಯೆಯನ್ನು ತುಂಬಾ ನಿರ್ಲಕ್ಷ್ಯ ಮಾಡುತ್ತಾರೆ ಎಂದರು. ಮಕ್ಕಳ ಕಣ್ಣಿನ ಆರೋಗ್ಯವನ್ನು ಖಾತ್ರಿಪಡಿಸಿಕೊಳ್ಳುವ ಸಲುವಾಗಿ ಸ್ಕೂಲಿಗೆ ಸೇರುವ ಮುನ್ನ ಕಣ್ಣಿನ ವೈದ್ಯರ ಬಳಿ ಪರೀಕ್ಷಿಸಿಸುವುದು ತುಂಬಾ ಒಳ್ಳೆಯದು ಎಂದರು.

"ಕಣ್ಣುಗಳು ನಮ್ಮ ಜೀವನದುದ್ದಕ್ಕೂ ನಮ್ಮ ಸಂಗಾತಿ. ಯಾವುದೇ ಯಂತ್ರಕ್ಕೆ ಆಗಾಗ ಸರ್ವೀಸ್ ಕೊಡುವ ರೀತಿಯಲ್ಲಿ ಕಣ್ಣಿನ ಚೆಕ್​ಅಪ್​ ಕೂಡ ಆಗಾಗ ಮಾಡಿಕೊಂಡು ಅದರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಪಡೆದುಕೊಳ್ಳಬೇಕು. ಈ ಬಾರಿಯ ದೃಷ್ಟಿ ದಿನದ ಥೀಮ್​ "ಲವ್​ ಯುವರ್​ ಐಯ್ಸ್​" ಅಂದರೆ ಕಣ್ಣುಗಳನ್ನು ಚೆನ್ನಾಗಿ ನೋಡಿಕೊಳ್ಳಿ ಅಂತ. ಯಾವುದೇ ವಸ್ತುವಿನ ಬೆಲೆ ಇದ್ದಾಗ ಗೊತ್ತಾಗೋಲ್ಲ ಅಂತಾರೆ. ಆದರೆ ಕಣ್ಣು ಅಥವಾ ಯಾವುದೇ ದೇಹದ ಅಂಗದ ಆರೋಗ್ಯಕ್ಕೆ ಮುನ್ನೆಚ್ಚರಿಕೆಯೇ ಮದ್ದು" ಎಂದು ಡಾ. ಭುಜಂಗ ಶೆಟ್ಟಿ ಹೇಳಿದರು.

"ಮೆಳ್ಳಗಣ್ಣು ಅಥವಾ ಸ್ಖಿಂಟ್​ ಐಯ್ಸ್​ಗೆ ತಕ್ಷಣ ಶುಶ್ರೂಷೆ ಮಾಡದಿದ್ದರೆ ಮೆಳ್ಳಗಿರುವ ಕಣ್ಣು ಕ್ರಮೇಣ ದೃಷ್ಟಿಹೀನವಾಗುತ್ತಾ ಹೋಗುತ್ತೆ. ಇದಕ್ಕೆ ಲೇಜಿ ಐಯ್​ ಅಂತೀವಿ. ಕೆಲಸ ಮಾಡದಿದ್ದರೆ ಅದು ದುರ್ಬಲವಾಗಿಬಿಡುತ್ತೆ. ದೊಡ್ಡವರಾದ ಮೇಲೆ ಏನೂ ಮಾಡಕ್ಕಾಗಲ್ಲ. ಆದ್ದರಿಂದ ತಕ್ಷಣ ತಜ್ಞರ ಬಳಿ ಕರೆದೊಯ್ಯಬೇಕು. ಮಕ್ಕಳಿಗೆ ದೋಷ ಇದ್ದರೆ ಅದು ಸೆಮಿಎಮರ್ಜೆನ್ಸಿ. ಅದನ್ನು ಮಕ್ಕಳಿದ್ದಾಗಲೇ ಸರಿ ಮಾಡಬೇಕು. ಬಹು ಬಾರಿ ಅದನ್ನು ಒಂದು ಕನ್ನಡಕವನ್ನು ಕೊಟ್ಟಷ್ಟೇ ಸರಿಪಡಿಸಬಹುದು. ಬದಲಿಗೆ ಹಾಗೇ ಬಿಟ್ಟಿಕೊಂಡು ಹೋದರೆ ಒಂದು ಕಣ್ಣಿನ ದೃಷ್ಟಿನೇ ಹೋಗಿ ಬಿಡುತ್ತೆ. ಆಪರೇಷನ್​ ಬೇಕಾದ್ರೂ ಅದನ್ನು ಮಾಡಿಸಬೇಕು. ಕಣ್ಣನ್ನು ನೇರ ಮಾಡಿ ಕೆಲಸ ಮಾಡುವ ಹಾಗೆ ಮಾಡುವುದು ಅಗತ್ಯ" ಎಂದರು.

ಪಂಚೇಂದ್ರಿಯಗಳಲ್ಲಿ ಬಹುಮುಖ್ಯವಾದ ಅಂಗವೆಂದರೆ ಕಣ್ಣುಗಳು. ಕಣ್ಣಿನ ಆರೋಗ್ಯ ಕಾಪಾಡಿಕೊಂಡರೇ ಜೀವನದ ಸೌಂದರ್ಯವನ್ನು ಸವಿಯಲು ಸಾಧ್ಯ. ದೃಷ್ಟಿದೋಷ, ದೃಷ್ಟಿಹೀನತೆಯ ಸಮಸ್ಯೆಗಳು ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಎಲ್ಲರಿಗೂ ಬರುತ್ತದೆ. ಕಣ್ಣುಗಳನ್ನು ಸರಳವಾಗಿ ಯಾವ ರೀತಿಯಲ್ಲಿ ರಕ್ಷಣೆ ಮಾಡಿಕೊಳ್ಳಬಹುದು, ಅವುಗಳ ಕಾಳಜಿ ವಹಿಸುವುದು ಹೇಗೆ - ನೀವೂ ತಿಳಿದುಕೊಳ್ಳಿ. ನೇತ್ರತಜ್ಞ ಡಾ.ಭುಜಂಗ ಶೆಟ್ಟಿ ಅವರೊಂದಿಗಿನ ವಿಜಯವಾಣಿ ಸಂವಾದದಲ್ಲಿ ಪಾಲ್ಗೊಳ್ಳಲು ಈ ಲಿಂಕ್​ ಒತ್ತಿ: https://www.clubhouse.com/join/vijayavani/zRnEMDxR/xVKLbkzM