ಉಡುಪಿ: ಕಣ್ಣು ನೋವಿನಿಂದ ಬಳಲುತ್ತಿದ್ದ 70 ವರ್ಷದ ವೃದ್ಧೆಯ ಬಲ ಕಣ್ಣಿನಿಂದ 9 ಸೆಂ.ಮೀ. ಉದ್ದದ ಜೀವಂತ ಹುಳವನ್ನು ಪ್ರಸಾದ್ ನೇತ್ರಾಲಯ ತಜ್ಞ ವೈದ್ಯರು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣ ಪ್ರಸಾದ್, ಡಾ.ಅಪರ್ಣಾ ನಾಯಕ್ ನೇತೃತ್ವದ ತಂಡ ಭಾನುವಾರ ರಾತ್ರಿ ತುರ್ತು ಚಿಕಿತ್ಸೆ ನಡೆಸಿ ಹುಳವನ್ನು ಹೊರಕ್ಕೆ ತೆಗೆದಿದ್ದಾರೆ. ನೇತ್ರದಲ್ಲಿ ಹುಳಬಾಧೆಯಿಂದ ಪೀಡಿತರಾಗಿದ್ದ ವೃದ್ಧೆ ಮಂಗಳವಾರ ನೇತ್ರಾಲಯಕ್ಕೆ ಭೇಟಿ ಬಂದಿದ್ದರು. ಎಡ ಕಣ್ಣು ನೋವಿನಿಂದ ಬಳಲುತ್ತಿದ್ದರು. ಪರೀಕ್ಷಿಸಿದ ಡಾ.ಕೃಷ್ಣಪ್ರಸಾದ್ ಅಕ್ಷಿಪಟಲದ ಸುತ್ತು ಹುಳ ತಿರುಗುತ್ತಿದ್ದುದನ್ನು ಗಮನಿಸಿ ಔಷಧ ನೀಡಿದರು. ಎಡಗಣ್ಣಿನಲ್ಲಿದ್ದ ಹುಳು ಕಾಣೆಯಾಗಿ, ಕಣ್ಣು ನೋವು ಕಡಿಮೆಯಾಗಿತ್ತು.
ಮೂರ್ನಾಲ್ಕು ದಿನಗಳ ಬಳಿಕ ಬಲಗಣ್ಣಿನಲ್ಲಿ ಮತ್ತೆ ನೋವು ಕಾಣಿಸಿಕೊಂಡಿತು. ಡಾ.ಕೃಷ್ಣಪ್ರಸಾದ್ ಅವರ ತಂಡ ತುರ್ತು ಚಿಕಿತ್ಸೆ ನಡೆಸಿ 9 ಸೆಂ.ಮೀ.ಉದ್ದರ ಜೀವಂತ ಹುಳವನ್ನು ಹೊರಕ್ಕೆ ತೆಗೆದಿದ್ದಾರೆ. 26 ವರ್ಷಗಳ ಅನುಭವದಲ್ಲಿ ಒಮ್ಮೆ ರೆಟಿನಾ ಹಿಂದಿನಿಂದ ಹಾಗೂ ಕಣ್ಣಿನ ಕುಣಿಕೆಯಿಂದ ಹದಿನೈದು ವರ್ಷಗಳ ಹಿಂದೆ ವಿಭಿನ್ನ ರೀತಿಯ ಹುಳವನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದ್ದಿದ್ದೆವು. ಆದರೆ, ಇದು ಹೊರ ಪದರದಿಂದ ಹುಳ ತೆಗೆದ ಪ್ರಥಮ ಅನುಭವ ಎಂದು ಡಾ.ಕೃಷ್ಣಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.