ನ್ಯೂಸ್

ಪತಿಯ ಮೊಬೈಲ್​ ಕಳುವಿಗೆ ಪತ್ನಿಯೇ ಸೂಪಾರಿ! ಖಾಕಿ ತನಿಖೆಯಲ್ಲಿ ಬಯಲಾಯ್ತು ಆಕೆಯ ರಹಸ್ಯ ಸಂಬಂಧ | Extramarital Affair

Extramarital Affair: ನನ್ನ ಮೊಬೈಲ್ ಕಳ್ಳತನವಾಗಿದೆ. ದಯವಿಟ್ಟು ಹುಡುಕಿಕೊಡಿ ಎಂದು ಪತಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದೇ ಇಂದು ಪತ್ನಿಯ ಅಸಲಿ ಮುಖ ಕಳಚಿ ಬೀಳಲು ಕಾರಣವಾಗಿದೆ. ಮೊಬೈಲ್​ ಹುಡುಕಿಕೊಡಲು ಹೋದ ಖಾಕಿ ಪಡೆಗೆ, ಕೇವಲ ಮೊಬೈಲ್​ ಮಾತ್ರವಲ್ಲದೇ ಹಲವು ಶಾಕಿಂಗ್ ಸಂಗತಿಗಳು ಲಭ್ಯವಾಗಿವೆ.

ಹೆಂಡತಿಯಿಂದಲೇ ಸೂಪಾರಿ!

ಸ್ಕೂಟಿಯಲ್ಲಿ ಬಂದ ಇಬ್ಬರು ಕಳ್ಳರು ವ್ಯಕ್ತಿಯ ಮೊಬೈಲ್​ ಅನ್ನು ಕಸಿದು ಪರಾರಿಯಾಗಿದ್ದರು. ಈ ಕುರಿತು ದಕ್ಷಿಣ ದೆಹಲಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮಹಿಳೆಯ ಪತಿ, ನನ್ನ ಮೊಬೈಲ್ ಕಳ್ಳತನವಾಗಿದೆ. ದಯಮಾಡಿ ಹುಡುಕಿಕೊಡಿ ಎಂದಿದ್ದ. ತನಿಖೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಸುಮಾರು 70ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆರೋಪಿಯ ಸುಳಿವು ಸಿಕ್ಕಿದೆ. ಕೂಡಲೇ ಆತನ ವಿವರ ಕಲೆಹಾಕಿದ ಖಾಕಿ ಪಡೆ, ಆತನ ಆಧಾರ್​ ಕಾರ್ಡ್​ ಮತ್ತು ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿದೆ. ಇಲ್ಲಿಂದ ಅಸಲಿ ಕಥೆ ಶುರುವಾಗಿದೆ.

ಘಟನೆಯನ್ನು ವಿವರಿಸಿರುವ ದಕ್ಷಿಣ ದೆಹಲಿಯ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅಂಕಿತ್ ಚೌಹಾಣ್, "ಆರೋಪಿ ಸ್ಕೂಟಿಯನ್ನು ಬಾಡಿಗೆಗೆ ಪಡೆದಿದ್ದ. ವ್ಯಕ್ತಿಯ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ, ತಂಡವು ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಬಲೋತ್ರಾವನ್ನು ತಲುಪಿ ಆರೋಪಿಗಳಲ್ಲಿ ಒಬ್ಬನಾದ ಅಂಕಿತ್ ಗೆಹ್ಲೋಟ್​ನನ್ನು ಬಂಧಿಸಿತು. ವಿಚಾರಣೆಗೆ ಒಳಪಡಿಸಿದಾಗ ಆತ ಫೋನ್​ ಕದ್ದಿಯಲು ವ್ಯಕ್ತಿಯ ಪತ್ನಿಯೇ ಕಾರಣ ಎಂದು ಹೇಳಿದ" ಎಂದಿದ್ದಾರೆ.

"ದೂರದಾರನ ಪತ್ನಿ ನಮ್ಮನ್ನು ಮೊಬೈಲ್ ಕದ್ದು ಪರಾರಿಯಾಗುವಂತೆ ಹೇಳಿದ್ದರು. ಇದಕ್ಕೆ ಸೂಪಾರಿ ಕೂಡ ಕೊಟ್ಟಿದ್ದರು. ಅವರಿಗೆ ಬೇರೊಬ್ಬ ಪುರುಷನೊಂದಿಗೆ ಅನೈತಿಕ ಸಂಬಂಧವಿತ್ತು. ತಮ್ಮಿಬ್ಬರ ಸರಸ-ಸಲ್ಲಾಪ ದೃಶ್ಯಗಳು ಪತಿಯ ಫೋನ್​ನಲ್ಲಿದೆ. ಅದನ್ನು ಡಿಲೀಟ್ ಮಾಡಲು ಸಾಧ್ಯವಾಗ್ತಿಲ್ಲ. ಹೀಗಾಗಿ ನೀವು ಆ ಮೊಬೈಲ್​ ಕಳ್ಳತನ ಮಾಡಬೇಕೆಂದು ಹೇಳಿದ್ದರು. ಇದಕ್ಕೆ ಸಂಚು ರೂಪಿಸಲು ಆಕೆ, ತನ್ನ ಗಂಡನ ದಿನಚರಿ, ಕಚೇರಿ ಸಮಯ ಮತ್ತು ಆಫೀಸ್​ಗೆ ಹೋಗುವ ಮಾರ್ಗವನ್ನು ನಮಗೆ ಕೊಟ್ಟಿದ್ದರು" ಎಂದು ಅಂಕಿತ್ ಖಾಕಿ ಮುಂದೆ ಸತ್ಯ ಕಕ್ಕಿದ್ದಾನೆ.

ಗಂಡನ ಮೊಬೈಲ್​ನಲ್ಲಿ ವಿಡಿಯೋ ಹೇಗೆ?

ಇಲ್ಲೇ ಇರೋದು ಅಸಲಿ ಟ್ವಿಸ್ಟ್​​! ಮೊಬೈಲ್ ಕದಿಯುವ ಹಿಂದಿದ್ದ ಕಾಣದ ಕೈ ಬಗ್ಗೆ ಅಂಕಿತ್​ ಮಾಹಿತಿ ಕೊಟ್ಟ ಬಳಿಕ ಆರೋಪಿ ಅಂಕಿತ್ ಮತ್ತು ದೂರುದಾರನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಪತ್ನಿ ಕರ್ಮಕಾಂಡ, ಕಳ್ಳಾಟಗಳು ಪತಿಗೆ ಮೊದಲೇ ಗೊತ್ತಿತ್ತು. ಹೀಗಾಗಿಯೇ, ಆಕೆಯ ಮೊಬೈಲ್​ನಲ್ಲಿದ್ದ ಫೋಟೋ, ವಿಡಿಯೋಗಳನ್ನು ಆತ ಮಧ್ಯರಾತ್ರಿಯಲ್ಲಿ ತನ್ನ ಮೊಬೈಲ್​ಗೆ ಕಳುಹಿಸಿಕೊಂಡಿದ್ದ. ಇದನ್ನು ಅರಿತ ಕಿಲಾಡಿ ಹೆಂಡತಿ, ಮನೆಯವರ ಮುಂದೆ ಎಲ್ಲಿ ತನ್ನ ಮಾನ ಹರಾಜಗಲಿದೆಯೋ ಎಂಬ ಭಯದಿಂದ ಗಂಡನ ಫೋನ್ ಕಳ್ಳತನ ಮಾಡಲು ಸುಪಾರಿ ಕೊಟ್ಟಿರುವುದು ಸ್ಪಷ್ಟವಾಗಿದೆ,(ಏಜೆನ್ಸೀಸ್).