ನ್ಯೂಸ್

ಶಿಕ್ಷಕರಿಗೆ ಹೆಚ್ಚುವರಿ ಕಿರಿಕಿರಿ: ಮರುಹೊಂದಾಣಿಕೆ ಪಟ್ಟಿ; ಪಿಎಸ್​ಟಿ, ಜಿಪಿಟಿ ವೃಂದ ಬಲ ಘೋಷಣೆ

Webdesk - Ravikanth

| ರಮೇಶ್ ಮೈಸೂರು ಬೆಂಗಳೂರು

ಹತ್ತಾರು ವರ್ಷಗಳ ನಿರೀಕ್ಷೆಗೆ ಫಲ ಎಂಬಂತೆ ಸಾರ್ವತ್ರಿಕ ವರ್ಗಾವಣೆಯಲ್ಲಿ ತಾವು ಬಯಸಿದ್ದ ಶಾಲೆ, ಸ್ಥಳವನ್ನು ಪಡೆದ ಶಿಕ್ಷಕರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ, ಈಗ ‘ಹೆಚ್ಚುವರಿ’ ಹಣೆಪಟ್ಟಿ ಚಿಂತೆಗೆ ಕಾರಣವಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಮರುಹೊಂದಾಣಿಕೆ (ರ್ಯಾಷನಲೈಜೇಷನ್) ಹಾಗೂ ವೃಂದವಾರು ಬಲ ನಿಗದಿಪಡಿಸಿ ಆದೇಶ ಹೊರಡಿಸಿದೆ. ವಿದ್ಯಾರ್ಥಿ- ಶಿಕ್ಷಕರ ಅನುಪಾತದನ್ವಯ (ಪಿಟಿಆರ್) ಹಲವು ವೃಂದಗಳಲ್ಲಿ ಹೆಚ್ಚುವರಿ ಹುದ್ದೆಗಳನ್ನು ಗುರುತಿಸಲಾಗಿದೆ. ಇವರನ್ನು ಮತ್ತೆ ಮರುನಿಯೋಜಿಸಲಾಗುತ್ತದೆ ಅಥವಾ ವರ್ಗಾವಣೆ ಮಾಡಲಾಗುತ್ತದೆ ಎಂದು ಇಲಾಖೆ ಹೇಳಿದೆ.

ಇದೇ ಮೊದಲ ಬಾರಿಗೆ ಪ್ರಾಥಮಿಕ ಶಾಲಾ ಶಿಕ್ಷಕರು (ಪಿಎಸ್​ಟಿ) ಹಾಗೂ ಪದವೀಧರ ಶಾಲಾ ಶಿಕ್ಷಕರು (ಜಿಪಿಟಿ) ಅನ್ವಯ ವಂದವಾರು ಬಲ ಘೋಷಣೆ ಮಾಡಲಾಗಿದೆ. ಶಿಕ್ಷಕರನ್ನು ವಿಷಯವಾರು ವಿಭಜಿಸಿರುವುದರಿಂದ ‘ಹೆಚ್ಚುವರಿ ಹೊರೆ’ ಜಾಸ್ತಿಯಾಗಿದೆ. ಈ ಬಾರಿ ಶಿಕ್ಷಕರ ಸಾರ್ವತ್ರಿಕ ವರ್ಗಾವಣೆಯಲ್ಲಿ 15-20 ಸಾವಿರ ಶಿಕ್ಷಕರಿಗೆ ಅವಕಾಶ ದೊರೆತಿದೆ. ಆದರೆ, ಈಗ ‘ಹೆಚ್ಚುವರಿ’ ಹಣೆಪಟ್ಟಿಯಿಂದಾಗಿ ಇದರ ಅರ್ಧದಷ್ಟು ಶಿಕ್ಷಕರು ಬಾಧಿತರಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ, ಸ್ಥಳ ಆಯ್ಕೆಯ ಅವಕಾಶವನ್ನು ಶಿಕ್ಷಕರಿಗೆ ನೀಡಿದಲ್ಲಿ ಕೊಂಚ ನಿರಾಳರಾಗಬಹುದು ಎನ್ನುವುದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಅವರ ಅಭಿಪ್ರಾಯ. ಕಠಿಣ ನಿಯಮಗಳಿಂದಾಗಿ 15-18 ವರ್ಷಗಳಿಂದ ವರ್ಗಾವಣೆ ದೊರೆಯದೆ ಸಂಕಷ್ಟ ಪಡುತ್ತಿರುವವರ ಸಂಖ್ಯೆಯೂ ದೊಡ್ಡದಿದೆ. ಶಿಕ್ಷಕರ ಕೊರತೆ ನೆಪವೊಡ್ಡದೆ ಸೇವಾ ಹಿರಿತನದವರಿಗೂ ಅವಕಾಶ ನೀಡಲಿ ಎನ್ನುವುದು ಸಂಘದ ಆಗ್ರಹ.

ಮುಖ್ಯ ಶಿಕ್ಷಕರಿಗೆ ಪದೋನ್ನತಿ: 2021ರ ಡಿಸೆಂಬರ್ 31ರ ಮಕ್ಕಳ ದಾಖಲಾತಿಗೆ (ಸ್ಯಾಟ್ಸ್) ಅನುಗುಣವಾಗಿ 2022-23ನೇ ಸಾಲಿಗೆ ವೃಂದವಾರು ಬಲ ಪರಿಷ್ಕರಿಸಲಾಗಿದೆ. ಅದರಂತೆ, 250ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗೆ ಒಂದು ಹಿರಿಯ ಮುಖ್ಯ ಶಿಕ್ಷಕ ಹುದ್ದೆ ಮಂಜೂರು ಮಾಡಲಾಗಿದೆ. ಇದರ ಜತೆಗೆ 400ಕ್ಕೂ ಹೆಚ್ಚು ಮಕ್ಕಳಿದ್ದಲ್ಲಿ ಒಂದು ಹೆಚ್ಚುವರಿ ಪಿಜಿಟಿ ಹುದ್ದೆ ಮಂಜೂರು ಮಾಡಲಾಗಿದೆ.

60ಕ್ಕೆ ಮೇಲ್ಪಟ್ಟು 250ಕ್ಕೆ ಒಳಪಟ್ಟು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಒಂದರಂತೆ ಮುಖ್ಯ ಶಿಕ್ಷಕ ಹುದ್ದೆಯಂತೆ 15,413 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಆದರೆ, ಪ್ರಸ್ತುತ ಪಿಟಿಆರ್ ಪ್ರಕಾರ 13,096 ಹುದ್ದೆಗಳ ಅಗತ್ಯವಿದೆ. ಮಂಜೂರಾದ ಹುದ್ದೆಗಳಿಗೆ ಹೋಲಿಸಿದಲ್ಲಿ ಇನ್ನೂ 2,317 ಖಾಲಿ ಉಳಿಯುತ್ತವೆ. ಮಕ್ಕಳ ದಾಖಲಾತಿ ಹೆಚ್ಚಳದಿಂದಾಗಿ ಹೆಚ್ಚುವರಿ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗಳನ್ನಾಗಿ ಪರಿವರ್ತಿಸಲಾಗಿದೆ.

ಶೂನ್ಯ ದಾಖಲಾತಿ ಸಂಕಷ್ಟ: ಗ್ರಾಮೀಣ ಪ್ರದೇಶಗಳಲ್ಲಿ ಶೂನ್ಯ ದಾಖಲಾತಿ ಶಾಲೆಗಳಿಗೆ ಬರವಿಲ್ಲ. ಇಲ್ಲಿನ ಶಿಕ್ಷಕರನ್ನು ಬೇರೆಡೆ ನಿಯೋಜಿಸದೆ ವಿಧಿಯಿಲ್ಲ. ರಾಜ್ಯದ 293 ಶಾಲೆಗಳನ್ನು ಶೂನ್ಯ ದಾಖಲಾತಿ ಎಂದು ಪರಿಗಣಿಸಲಾಗಿದೆ. ಈ ಶಾಲೆಗಳಲ್ಲಿದ್ದ 370 ಹುದ್ದೆಗಳನ್ನು ಅಗತ್ಯವಿರುವ ಕಡೆಗಳಲ್ಲಿ ಮರು ಹೊಂದಾಣಿಕೆ ಮಾಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಮರುಹೊಂದಾಣಿಕೆಗೆ ತಂತ್ರಾಂಶ: 2022-23ನೇ ಸಾಲಿನ ಶಿಕ್ಷಕರ ಮರುಹೊಂದಾಣಿಕೆ ಪ್ರಕ್ರಿಯೆಯನ್ನು ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಸಾಫ್ಟವೇರ್ ಡೆವಲಪ್​ವೆುಂಟ್ ಸೆಂಟರ್ ಅಭಿವೃದ್ಧಿಪಡಿಸಿರುವ ತಂತ್ರಾಂಶದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ ತಾಲೂಕುವಾರು, ಜಿಲ್ಲಾವಾರು ವೃಂದಬಲವಾರು ಹುದ್ದೆಗಳ ವಿವರಗಳನ್ನು ನೀಡಲಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ (ಪಿಎಸ್​ಟಿ) ನಿಗದಿಪಡಿಸಿದ ಹುದ್ದೆಗಳು

ಭಾಷೆಗಳು (ಆಯಾ ಮಾಧ್ಯಮ); ಗಣಿತ- ವಿಜ್ಞಾನ, ಆಂಗ್ಲ

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಟಿ) ಹುದ್ದೆಗಳು

ಭಾಷೆ (ಆಯಾ ಮಾಧ್ಯಮ); -ಗಣಿತ- ವಿಜ್ಞಾನ; ಸಮಾಜ ಪಾಠಗಳು; ಜೀವವಿಜ್ಞಾನಶಾಸ್ತ್ರ (ಸಿಬಿಝೆಡ್); ಭಾಷೆ- ಆಂಗ್ಲ; ಭಾಷೆ-ಹಿಂದಿ

ಶಿಕ್ಷಕರ ಮರು ಹೊಂದಾಣಿಕೆ ಹಾಗೂ ವೃಂದವಾರು ಬಲ ಘೋಷಣೆಗೆ ಸಂಬಂಧಿಸಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಹೆಚ್ಚುವರಿ ಶಿಕ್ಷಕರ ನಿಯೋಜನೆ ವೇಳೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. | ಶಂಭುಲಿಂಗನಗೌಡ ಪಾಟೀಲ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವರಿ: ಸರ್ಕಾರಿ ಆದೇಶದನ್ವಯ 1,08,915 ಪ್ರಾಥಮಿಕ ಶಾಲಾ ಶಿಕ್ಷಕರ (ಪಿಎಸ್​ಟಿ) ಹುದ್ದೆಗಳನ್ನು ಮಂಜೂರಾತಿ ಮಾಡಲಾಗಿದೆ. ಆದರೆ, 1,13,164 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಜೂರಾದ ವೃಂದ ಬಲಕ್ಕಿಂತ 3,552 ಶಿಕ್ಷಕರು ಹೆಚ್ಚಾಗಿದ್ದಾರೆ. ಸಮಾಧಾನದ ವಿಷಯವೆಂದರೆ ಅಗತ್ಯಗಳಿಗೆ ಅನುಗುಣವಾಗಿ ಹುದ್ದೆ ಖಾಲಿಯಾಗುವವರೆಗೆ ಮುಂದುವರಿಸಲಾಗುತ್ತಿದೆ ಎಂದು ಇಲಾಖೆ ಹೇಳಿದೆ. ಇನ್ನು, ಬಹುಮಾಧ್ಯಮ ಶಾಲೆ, ಅಲ್ಪಸಂಖ್ಯಾತ ಶಾಲೆ, ಮಲೆನಾಡು ಜಿಲ್ಲೆಗಳ ಶಾಲೆ, ಶಾಸಕರ ಮಾದರಿ ಶಾಲೆಗಳಲ್ಲಿನ ಹುದ್ದೆಗಳ ಮರು ಹಂಚಿಕೆಗೆ ಸಂಬಂಧಿಸಿದ ವಿವರಗಳನ್ನು ಇಲಾಖೆ ಪ್ರಕಟಿಸಿದೆ.

ಶಿಕ್ಷಕರು-ಮಕ್ಕಳ ಅನುಪಾತ ನಿಗದಿ: ಪ್ರಸ್ತುತ ಇಲಾಖೆಯು ಪ್ರತಿ 11 ಮಕ್ಕಳಿಗೆ ಒಬ್ಬ ಶಿಕ್ಷಕನಂತೆ ಅನುಪಾತ ರೂಪಿಸಿದೆ. ನಂತರದ 30 ಮಕ್ಕಳಿಗೆ ಒಬ್ಬರಂತೆ ಶಿಕ್ಷಕರನ್ನು ಒದಗಿಸುತ್ತಿದೆ. ಆದರೆ, ಇದನ್ನು ಹಿಂದಿನ 10 ಮಕ್ಕಳಿಗೆ ಒಬ್ಬರಂತೆ ಉಳಿಸಿಕೊಳ್ಳಿ ಎನ್ನುವುದು ಶಿಕ್ಷಕರ ಸಂಘಟನೆಗಳ ಒತ್ತಾಯ. ಮರು ಹೊಂದಾಣಿಕೆಯ ನಂತರ ರಾಜ್ಯದಲ್ಲಿ ಒಟ್ಟಾರೆ 6-7 ಸಾವಿರ ಶಿಕ್ಷಕರು ಹೆಚ್ಚುವರಿ ಶಿಕ್ಷಕರೆನಿಸಿಕೊಳ್ಳಲಿದ್ದಾರೆ. ಒಟ್ಟಾರೆ ಮತ್ತೊಂದು ಸುತ್ತಿನ ಶಿಕ್ಷಕರ ಸಾರ್ವತ್ರಿಕ ವರ್ಗಾವಣೆಗೆ ಪೂರ್ವಭಾವಿ ಪ್ರಕ್ರಿಯೆ ಇದಾಗಿರಲಿದೆ.

ಬೇಡಿಕೆಗಳೇನು?

  • ಹೆಚ್ಚುವರಿ ಪಟ್ಟಿಗೂ ಮುನ್ನ ಶಿಕ್ಷಕರಿಗೆ ಪದೋನ್ನತಿ ನೀಡಿ
  • ಆಯಾ ಘಟಕ, ತಾಲೂಕು, ಜಿಲ್ಲೆ, ವಲಯದೊಳಗೆ ವರ್ಗಾವಣೆಗೆ ಆದ್ಯತೆ ನೀಡಿ
  • ಸ್ಥಳ ಆಯ್ಕೆಯ ಅವಕಾಶವನ್ನು ಶಿಕ್ಷಕರಿಗೇ ನೀಡಿ. ವರ್ಗಾವಣೆ ಶಿಕ್ಷೆಯಾಗುವುದು ಬೇಡ
  • ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತವನ್ನು 10:1ಕ್ಕೆ ನಿಗದಿ ಮಾಡಿ