ನ್ಯೂಸ್

ಕೇರಳ ವಿದ್ಯಾರ್ಥಿಗಳ ಸುಲಿಗೆ

ಬೆಂಗಳೂರು: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಿದ್ದ ೪ ಮಂದಿ ಆರೋಪಿಗಳನ್ನು ಕೃತ್ಯ ನಡೆದ ೧೨ ಗಂಟೆಯೊಳಗೆ ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಅನಂತಕೃಷ್ಣ(೨೩), ಎ.ಎಸ್.ಪ್ರಮೋದ್ (೪೨), ಆದರ್ಶ್(೨೨) ಮತ್ತು ದೀಪಕ್ ಆರ್.ಚಂದ್ರ(೩೭) ಬಂಧಿತರು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ೩ ಕಾರು, ೧ ಏರ್ ಪಿಸ್ತೂಲ್, ಕೈಕೋಳ, ಲಾಟಿ, ನಕಲಿ ೩ ಸಿಬಿಐ ಐಡಿ ಕಾರ್ಡ್, ಬ್ಯಾಟನ್ ಮತ್ತು ೪ ಮೊಬೈಲ್ ೆನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿಯೊಬ್ಬ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಮೇ ೨೭ ರಂದು ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಸರುಘಟ್ಟ ಮುಖ್ಯರಸ್ತೆಯಲ್ಲಿರುವ ಎ.ಜಿ.ಬಿ ಲೇಔಟ್‌ನಲ್ಲಿ ದೂರುದಾರರು ತಮ್ಮ ಐದು ಮಂದಿ ಸ್ನೇಹಿತರೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿದ್ದಾಗ ಅಪರಿಚಿತ ವ್ಯಕ್ತಿಗಳು ಏಕಾಏಕಿ ರೂಮ್‌ಗೆ ನುಗ್ಗಿ ಸಿಬಿಐ ಅಧಿಕಾರಿಗಳೆಂದು ತಮ್ಮ ಬಳಿ ಇದ್ದ ಪಿಸ್ತೂಲ್, ಐಡಿ ಕಾರ್ಡ್, ಲಾಟಿಗಳನ್ನು ತೋರಿಸಿ ಕೈಗಳಿಂದ ಹೊಡೆದು ಅವರು ತಂದಿದ್ದ ಗಾಂಜಾವನ್ನು ಕೈಗೆಕೊಟ್ಟ ವಿಡಿಯೋ ಮಾಡಿಕೊಂಡು ೩ ಲಕ್ಷ ರೂ. ಹಣವನ್ನು ಕೊಡಿ ಇಲ್ಲವಾದರೆ ಈ ವಿಡಿಯೋವನ್ನು ಲೀಕ್ ಮಾಡುತ್ತೇವೆ ಎಂದು ಹೆದರಿಸಿ ವಿದ್ಯಾರ್ಥಿಗಳ ಮೊಬೈಲ್ ಕಿತ್ತುಕೊಂಡು ಯುಪಿಐ ಐಡಿಗೆ ೯೦ ಸಾವಿರ ರೂ. ವರ್ಗಾಹಿಸಿಕೊಂಡು ನಂತರ ಮೊಬೈಲ್ ೆನ್ ಅನ್ನು ಕೊಟ್ಟು ಉಳಿದ ಹಣ ನಾಳೆ ಸಂಜೆಯೊಳಗೆ ನೀಡಬೇಕೆಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದರು.
ಹಣ ಕಳೆದುಕೊಂಡ ವಿದ್ಯಾರ್ಥಿ ಈ ಸಂಬಂಧ ಸೋಲದೇವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಜಿ.ಎನ್.ನಾಗೇಶ್ ನೇತೃತ್ವದ ತಂಡ ಕೃತ್ಯ ನಡೆದ ಸ್ಥಳದ ಅಕ್ಕ ಪಕ್ಕದಲ್ಲಿರುವ ಸಿ ಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದಾಗ ಆರೋಪಿಗಳ ಸುಳಿವು ಪತ್ತೆಯಾಗಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಅತ್ತಿಬೆಲೆ ಬಳಿ ಒರ್ವ ಆರೋಪಿಯನ್ನು ಮತ್ತು ತಮಿಳುನಾಡಿನ ಧರ್ಮಪುರಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕೃತ್ಯ ಎಸಗಿ ಕೇರಳಕ್ಕೆ ಪರಾರಿಯಾಗುತ್ತಿದ್ದರು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಲಭವಾಗಿ ಹಣ ಗಳಿಸಲು ಕೃತ್ಯ:
ಆರೋಪಿಗಳು ಕೇರಳ ಮೂಲದವರಾಗಿದ್ದು ಒಬ್ಬರಿಗೊಬ್ಬರು ಪರಿಚಿತರಾಗಿದ್ದು, ಕೇರಳ ಮೂಲದ ವಿದ್ಯಾರ್ಥಿಗಳು ವಾಸವಿರುವ ಸ್ಥಳ ಮತ್ತು ಅಪಾರ್ಟ್‌ಮೆಂಟ್‌ಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ನಂತರ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ಅಪಾರ್ಟ್‌ಮೆಂಟ್‌ನ ಭದ್ರತೆಗಾಗಿ ನಿಯೋಜಿಸಲಾಗಿದ್ದ ಸೆಕ್ಯುರಿಟಿ ಗಾರ್ಡ್‌ಗೆ ಆರೋಪಿಗಳು ತಾವು ಸಿಬಿಐ ಅಧಿಕಾರಿಗಳು ಎಂದು ಹೇಳಿ ತಮ್ಮ ಬಳಿ ಇದ್ದ ನಕಲಿ ಐಡಿ ಕಾರ್ಡ್‌ನ್ನು ತೋರಿಸಿ ಅಪಾರ್ಟ್‌ಮೆಂಟ್ ಒಳಗೆ ನುಗ್ಗಿ ವಿದ್ಯಾರ್ಥಿಗಳಿಗೆ ಹೆದರಿಸಿ ಹಣ ವರ್ಗಾವಣೆ ಮಾಡಿಕೊಂಡು ಪರಾರಿಯಾಗಿದ್ದರು. ಆರೋಪಿಗಳು ಸುಲಭವಾಗಿ ಹಣ ಗಳಿಸಲು ಈ ರೀತಿಯ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.