ನ್ಯೂಸ್

ಹೆಡ್ ಕಾನ್‌ಸ್ಟೆಬಲ್‌ನಿಂದ ಸುಲಿಗೆ?

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಬ್ಯೂಟಿ ಪಾರ್ಲರ್ ಆರಂಭಿಸಲು ಶಿವಮೊಗ್ಗದಿಂದ ನಗರಕ್ಕೆ ಬಂದಿದ್ದ ಯುವತಿ ಬಳಿ ಚಿನ್ನಾಭರಣ ಮತ್ತು ನಗದು ಸುಲಿಗೆ ಮಾಡಿದ ಆರೋಪದಡಿ ಹೆಡ್ ಕಾನ್‌ಸ್ಟೆಬಲ್ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂ.ಎಸ್. ಪಾಳ್ಯದ ನಿವಾಸಿ ಸಿಂಚನಾ, ಈ ಕುರಿತು ದೂರು ಸಲ್ಲಿಸಿದ್ದಾರೆ. ನೆಲಮಂಗಲ ಗ್ರಾಮಾಂತರ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಗಿರಿಜೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ. ಮತ್ತೊಂದಡೆ, ಸಿಸಿ ಕ್ಯಾಮರಾಗಳ ದೃಶ್ಯಾವಳಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗದ ಸಿಂಚನಾ, ನಗರದ ಎಂ.ಎಸ್. ಪಾಳ್ಯದಲ್ಲಿ ನೆಲೆಸಿದ್ದರು. ಬ್ಯೂಟಿಷಿಯನ್ ಆಗಿರುವ ಸಿಂಚನಾ, 5 ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಕೊಡಿಗೆಹಳ್ಳಿಯ ರಾಯಲ್ ಲೈಫ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. 15 ದಿನಗಳ ಹಿಂದೆ ಊರಿಗೆ ತೆರಳಿದ್ದ ಅವರು, ಸ್ವಂತ ಪಾರ್ಲರ್ ಆರಂಭಿಸುವ ಉದ್ದೇಶದಿಂದ ತಾಯಿಯಿಂದ 2.50 ಲಕ್ಷ ರೂ. ನಗದು ಮತ್ತು ಅಡಮಾನ ಇಟ್ಟು ಸಾಲ ಪಡೆಯಲು ತಾಯಿ ಬಳಿಯಿದ್ದ ಚಿನ್ನದ ಸರ ತೆಗೆದುಕೊಂಡು ನಗರಕ್ಕೆ ಪ್ರಯಾಣ ಬೆಳೆಸಿದ್ದರು. ಮೇ 13ರ ಸಂಜೆ 6ರಲ್ಲಿ ಶಿವಮೊಗ್ಗದಿಂದ ನಗರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತಡರಾತ್ರಿ 1.30ರಲ್ಲಿ ತುಮಕೂರು ರಸ್ತೆಯ 8ನೇ ಮೈಲಿಗೆ ಬಂದಿಳಿದ್ದರು.

ಮೊಬೈಲ್ ಚಾರ್ಜಿಂಗ್ ಇಲ್ಲದ ಕಾರಣ ಜಂಕ್ಷನ್‌ನಲ್ಲಿ ನಿಂತಿದ್ದಾಗ ಜೀಪ್‌ನಲ್ಲಿ ಬಂದ ಪೊಲೀಸ್, ‘ಇಲ್ಲಿ ಯಾಕೆ ನಿಂತಿದ್ದೀಯಾ? ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನೆ ಮಾಡಿದ್ದರು. ಆಗ ಪೇಯಿಂಗ್ ಗೆಸ್ಟ್‌ಗೆ ಎಂದಾಗ ಡ್ರಾಪ್ ಮಾಡುವುದಾಗಿ ಕಾನ್‌ಸ್ಟೆಬಲ್ ಕರೆದಿದ್ದರು. ಯುವತಿ ನಿರಾಕರಿಸಿದಾಗ, ಗದರಿಸಿ ಜೀಪ್‌ಗೆ ಹತ್ತಿಸಿಕೊಂಡಿದ್ದರು.

ಪಿ.ಜಿ. ಕಡೆಗೆ ಹೋಗುವ ಬದಲಿಗೆ ಜೀಪ್ ಅನ್ನು ನೆಲಮಂಗಲದ ಕಡೆಗೆ ತಿರುಗಿಸಿ ನೆಲಮಂಗಲ ಠಾಣೆ ಸಮೀಪಕ್ಕೆ ಕರೆದೊಯ್ದು ಬ್ಯಾಗ್ ಪರಿಶೀಲನೆ ನಡೆಸಿದ್ದರು. ಬ್ಯಾಗ್‌ನಲ್ಲಿದ್ದ 2.50 ಲಕ್ಷ ರೂ. ನಗದು ಹಾಗೂ ಚಿನ್ನದ ಸರವನ್ನು ಕಸಿದುಕೊಂಡಿದ್ದರು. ವಿರೋಧ ವ್ಯಕ್ತಪಡಿಸಿದ್ದಕ್ಕೆ ಯುವತಿ ಮೇಲೆ ಹಲ್ಲೆ ನಡೆಸಿದ್ದು, ಅಲ್ಲಿಂದ ಯುವತಿ ತಪ್ಪಿಸಿಕೊಂಡು ಹೋಗಿದ್ದಳು.

ವಾಹನ ಸವಾರನ ಸಹಾಯದಿಂದ 8ನೇ ಮೈಲಿಗೆ ಡ್ರಾಪ್ ಪಡೆದು ಬಿಎಂಟಿಸಿ ಬಸ್‌ನಲ್ಲಿ ಪಿಜಿಗೆ ತೆರಳಿ, ನಂತರ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.