ವಿಜಯವಾಣಿ ಸುದ್ದಿಜಾಲ ಆನೇಕಲ್
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿ ಎದುರು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಗೂ ಮುನ್ನ ತಮಟೆ ವಾದ್ಯಗಳ ಮೂಲಕ ಚಳವಳಿ ನಡೆಸಿ, ತಾಲೂಕು ಕಚೇರಿವರೆಗೆ ಮೆರವಣಿಗೆ ತೆರಳಲಾಯಿತು.
ಆನೇಕಲ್‌ಗೆ ಮೊದಲು ಮೆಟ್ರೋ ರೈಲು ಸಂಪರ್ಕ ಆಗಬೇಕು. ನಂತರ ತಮಿಳುನಾಡಿಗೆ ಮೆಟ್ರೋ ರೈಲು ಬಿಡಲಿ ಎಂದು ವಾಟಾಳ್ ನಾಗರಾಜ್ ಹೇಳಿದರು. ತಮಿಳುನಾಡಿನ ಹೊಸೂರು ಕರ್ನಾಟಕಕ್ಕೆ ಸೇರಬೇಕು. ಇದನ್ನು ರಾಜ್ಯಕ್ಕೆ ಸೇರಿಸಿಕೊಂಡ ನಂತರ ಮೆಟ್ರೋ ಕಾಮಗಾರಿ ಮಾಡಲಿ, ಅದನ್ನು ಹೊರತುಪಡಿಸಿ ಆನೇಕಲ್ ಹಾಗೂ ತಮಿಳುನಾಡಿನ ಗಡಿ ಅತ್ತಿಬಲೆವರೆಗೆ ಮೆಟ್ರೋ ಕಾಮಗಾರಿ ಮಾಡಲಿ ಎಂದು ಹೇಳಿದರು.
ಚಾಮರಾಜನಗರ ಜಿಲ್ಲೆಯ ತಾಳವಾಡಿ ಗ್ರಾಮ ಕರ್ನಾಟಕಕ್ಕೆ ಸೇರಬೇಕು, ನಾನು ಇದರ ಬಗ್ಗೆ ಅನೇಕ ಬಾರಿ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ, ಜನರ ತೆರಿಗೆ ಹಣವನ್ನು ಖರ್ಚು ಮಾಡುವುದಕ್ಕೆ ಬರುವ ರಾಜಕಾರಣಿಗಳು ಕರ್ನಾಟಕದಲ್ಲಿ ಇದ್ದಾರೆ, ಭಾಷೆ, ನೆಲ, ಜಲಕ್ಕಾಗಿ ಹೋರಾಟ ಮಾಡುವ ಸರ್ಕಾರಗಳು ಇಲ್ಲ ಎಂದು ಕಿಡಿಕಾರಿದರು.
ಕರ್ನಾಟಕ ಏಕೀಕರಣ ಆದಾಗಿನಿಂದಲೂ ಕನ್ನಡ ಭಾಷೆಯ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ತೆಲುಗು ಭಾಷಿಕರು, ತಮಿಳು, ಹಿಂದಿ ಮಾತನಾಡುವವರು ನಾಡಿಗೆ ಬಂದು ಕನ್ನಡ ಭಾಷೆಯನ್ನು ಮರೆಯುವಂತೆ ಮಾಡುತ್ತಿದ್ದಾರೆ, ನಮ್ಮ ನೆಲದಲ್ಲಿ ಇದ್ದಮೇಲೆ ಇಲ್ಲಿನ ಭಾಷೆ ಅಳವಡಿಕೆ ಕಡ್ಡಾಯ ಆಗಬೇಕು ಎಂದು ಹೇಳಿದರು.
ಇಂಗ್ಲಿಷ್ ಬೋರ್ಡ್ ಸುಟ್ಟು ಹಾಕುತ್ತೇವೆ
ಕರ್ನಾಟಕದಲ್ಲಿ ಸ್ಥಳೀಯರಿಗೆ ಮೊದಲು ಉದ್ಯೋಗ ನೀಡಬೇಕು. ಕಿರಣ್ ಮಜುಮ್ದಾರ್ ಷಾ ಮತ್ತು ಮೋಹನ್ ದಾಸ್ ಪೈ ಕನ್ನಡಿಗರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ಕಡೆಗಣನೆ ಮಾಡುತ್ತಿದ್ದಾರೆ ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು. ಅಂಗಡಿ, ಹೋಟೆಲ್ ಹಾಗೂ ಕಾರ್ಖಾನೆಗಳಿಗೆ ನಾಮಲಕಗಳನ್ನು ಹಾಕುವಾಗ ಶೇ.90 ಕನ್ನಡ ಕಡ್ಡಾಯ ಮಾಡಿ ಸೂಚನೆ ನೀಡದೆ ಹೋದರೆ ಇವರು ಕನ್ನಡಕ್ಕೆ ಗೌರವ ಕೊಡುವುದಿಲ್ಲ. ನ.15ರ ನಂತರ ನಾಮಫಲಕ ಬದಲಿಸದೆ ಹೋದರೆ ಇಂಗ್ಲೀಷ್ ಬೋರ್ಡ್ ಗಳನ್ನು ಕಿತ್ತುಹಾಕಿ ಸುಟ್ಟು ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.