ನ್ಯೂಸ್

ಬೈಡೆನ್​ಗೆ ಅಮೆರಿಕ ಗದ್ದುಗೆ ಭಾರತೀಯರಿಗೆ ಕೊಡುಗೆ?

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್ ಅಧಿಕಾರ ಸ್ವೀಕಾರಕ್ಕೂ ಮೊದಲೇ ಭಾರತ ಹಾಗೂ ಭಾರತೀಯರ ಹೃದಯದಲ್ಲಿ ಭರವಸೆಯ ಆಶಾಕಿರಣ ಮೂಡಿದೆ. ಹೆಚ್ಚಿನ ಕುಶಲತೆ ಹೊಂದಿರುವ ವಲಸಿಗರ ವೀಸಾ ಸಂಖ್ಯೆಯನ್ನು ಹೆಚ್ಚಿಸುವ ಬೈಡೆನ್ ನಿಲುವು ಎಚ್-1 ಬಿ ವೀಸಾ ಮೇಲೆ ಟ್ರಂಪ್ ವಿಧಿಸಿರುವ ಕಠಿಣ ನಿರ್ಬಂಧ ಸಡಿಲಗೊಳ್ಳುವ ನಿರೀಕ್ಷೆ ಹುಟ್ಟಿಸಿದೆ. ಇದರ ಜತೆಗೆ ಅಮೆರಿಕದ ಪೌರತ್ವಕ್ಕೆ ರಹದಾರಿಯಾದ ಗ್ರೀನ್ ಕಾರ್ಡ್ ವಿತರಣೆಯನ್ನು ಹೆಚ್ಚಿಸುವ ಯೋಚನೆಯನ್ನೂ ಹೊಸ ಅಧ್ಯಕ್ಷರು ಹೊಂದಿದ್ದಾರೆನ್ನಲಾಗಿದೆ. ಇದು ನಿಜವಾದಲ್ಲಿ ಭಾರತದ ಮಾಹಿತಿ ತಂತ್ರಜ್ಞಾನ (ಐಟಿ) ವಲಯದ ಸಾವಿರಾರು ಉದ್ಯೋಗಿಗಳ ಪಾಲಿಗೆ ದೀಪಾವಳಿ ಕೊಡುಗೆಯಾಗಲಿದೆ.

ಎಚ್-1 ಬಿ ವೀಸಾದ ಮೇಲೆ ತೆರಳಿರುವ ವಲಸಿಗರ ಸಂಗಾತಿಗೆ ಉದ್ಯೋಗ ಮಾಡದಂತೆ ಇರುವ ನಿರ್ಬಂಧ ತೆಗೆದುಹಾಕುವ ಬಗ್ಗೆ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಉತ್ಸುಕವಾಗಿದ್ದಾರೆ. ಇದರಿಂದ ಭಾರತೀಯ ಕುಟುಂಬಗಳಿಗೆ ಲಾಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ವಿುಕ ವಲಯವನ್ನು ಚಟುವಟಿಕೆಯಿಂದ ಇರಿಸಿಕೊಳ್ಳಲು ತಾತ್ಕಾಲಿಕವಾಗಿ ವೀಸಾ ವಿತರಣೆಗೆ ಆದೇಶಿಸಲಾಗುತ್ತದೆ. ನಂತರ ಅಧಿಕ ಕುಶಲ ವರ್ಗದ ವಲಸಿಗರು ಹಾಗೂ ವಿದೇಶಗಳಿಗೆ ಹಂಚಿಕೆಯಾಗಿರುವ ನೌಕರರ ಆಧಾರಿತ ವೀಸಾ ಮಿತಿ ಸಡಿಲಗೊಳಿಸುವ ಇರಾದೆ ಇದೆ ಎಂದು ವೀಸಾ ಕುರಿತ ತಂಡ ತಿಳಿಸಿದೆ. ಪಿಎಚ್.ಡಿ ವ್ಯಾಸಂಗ, ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ವಿಷಯ ಕಲಿಕೆಯ ವಿದೇಶಿ ವಿದ್ಯಾರ್ಥಿಗಳ ಮೇಲೆ ಇರುವ ಮಿತಿಯನ್ನು ಬೈಡೆನ್ ತೆಗೆದುಹಾಕಲು ಬಯಸಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಕುಶಲತೆ ಹೊಂದಿರುವ ಉದ್ಯೋಗಿಗಳಿಗೆ ನೀಡುವ ಎಚ್- 1 ಬಿ ವೀಸಾ ವಿತರಣೆಯನ್ನು ಕಡಿಮೆಗೊಳಿಸಿರುವ ಟ್ರಂಪ್ ಸರ್ಕಾರ, ಕರೊನಾ ಹಿನ್ನೆಲೆಯಲ್ಲಿ ಕಳೆದ ಜೂನ್​ನಲ್ಲಿ ಇದನ್ನು ಈ ವರ್ಷದ ಅಂತ್ಯದವರೆಗೆ ತಡೆ ಹಿಡಿದಿದೆ.

5 ಲಕ್ಷ ಜನರ ನಿರೀಕ್ಷೆ

ಭಾರತ ಮೂಲದ 5 ಲಕ್ಷ ಮಂದಿ ಸೇರಿ 1.10 ಕೋಟಿ ಜನರು ಅಮೆರಿಕದಲ್ಲಿರುವ ದಾಖಲೆ ರಹಿತ ವಲಸಿಗರಾಗಿದ್ದಾರೆ. ಇವರನ್ನು ಕಾನೂನುಬದ್ಧಗೊಳಿಸುವ ಮಾರ್ಗಸೂಚಿ ರೂಪಿಸಲು ಬೈಡೆನ್ ಮುಂದಾಗಲಿದ್ದಾರೆ. ವಾರ್ಷಿಕವಾಗಿ 95 ಸಾವಿರ ವಲಸಿಗರನ್ನು ಪೌರತ್ವಕ್ಕೆ ಪರಿಗಣಿಸುವ ಸಾಧ್ಯತೆ ಇದೆ. ಅಧಿಕಾರ ಸ್ವೀಕರಿಸಿದ ನಂತರ ಈ ಕುರಿತ ಶಾಸನಕ್ಕೆ ಸಂಸತ್​ಗೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ ಎಂದು ಅವರ ವಲಸೆ ನೀತಿಯ ಪರಿಶಿಷ್ಟದಲ್ಲಿ ಉಲ್ಲೇಖಿಸಲಾಗಿದೆ. ವೀಸಾ ನಿಯಮದ ಕಾರಣ ವಿಘಟಿತವಾಗಿರುವ ಕುಟುಂಬಗಳನ್ನು ಸೇರಿಸುವ ನಿಟ್ಟಿನಲ್ಲಿ ಕಠಿಣ ನಿಯಮಕ್ಕೆ ಬೈಡೆನ್ ತಿಲಾಂಜಲಿ ನೀಡಲಿದ್ದಾರೆ. ಅಷ್ಟೇ ಅಲ್ಲ ಡ್ರೀಮರ್ಸ್​ಗೆ (ಬಾಲ್ಯದಲ್ಲಿ ಕಾನೂನು ಬಾಹಿರವಾಗಿ ಅಮೆರಿಕಕ್ಕೆ ಬಂದವರು) ಅನು ಕೂಲಕರ ನೀತಿ ಜಾರಿ ಆಗಲಿದೆ ಎನ್ನಲಾಗಿದೆ.