ಬೀರೂರಿನ ಕಂಪ್ಯೂಟರ್ ಸೆಂಟರ್‌ನಲ್ಲಿ ರೈತರು ರಾಗಿ ಬೆಳೆಗೆ ವಿಮಾ ಕಂತು ಪಾವತಿಸುತ್ತಿರುವುದು.  
ನ್ಯೂಸ್

ಫಸಲ್ ಬಿಮಾ ವಿಮಾ ಕಂತು ಪಾವತಿ ಅವಧಿ ಮುಕ್ತಾಯ

ಬೀರೂರು: ಪ್ರಸಕ್ತ ಬಾರಿ ಮಳೆ ವಿಳಂಬವಾಗಿರುವುದಲ್ಲದೇ ಸದ್ಯ ಕ್ಷೀಣಿಸಿದ್ದ್ದರಿಂದ ಬೆಳೆ ವಿಮೆಯಿಂದಾದರೂ ಸಾಧ್ಯವಾದಷ್ಟು ಪರಿಹಾರ ಪಡೆಯುವ ಸಲುವಾಗಿ ಪ್ರಧಾನ ಮಂತ್ರಿ ಸಲ್ ಬಿಮಾ ಯೋಜನೆಯಡಿ ವಿಮಾ ಸೌಲಭ್ಯದ ಕಂತು ಪಾವತಿಸಲು ಕೊನೇ ದಿನ ಬುಧವಾರ ರೈತರು ಮುಗಿಬಿದ್ದಿದ್ದರು. ಆದರೆ ಬಿತ್ತನೆ ವಿಳಂಬವಾದ ರೈತರು ವಿಮಾ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.

ಮೇನಲ್ಲಿ ವಾಡಿಕೆಯಂತೆ ಮುಂಗಾರು ಪ್ರಾರಂಭವಾಗಿದ್ದರೆ ಕೃಷಿ ಇಲಾಖೆ ನೀಡಿದ ನಿಗದಿತ ಅವಧಿಯೊಳಗೆ ರೈತರು ಬೆಳೆಗಳ ಮೇಲೆ ವಿಮಾ ಕಂತು ತುಂಬಲು ಮುಂದಾಗುತ್ತಿದ್ದರು. ಆದರೆ ಜೂನ್‌ನಲ್ಲಿ ವಾಡಿಕೆಯಷ್ಟು ಮಳೆಯಾಗದೆ ವಿಳಂಬವಾಗಿದ್ದರಿಂದ ಮುಂಗಾರು ಹಂಗಾಮು ಬೆಳೆಗಳ ಬಿತ್ತನೆಗೆ ಹಿನ್ನಡೆಯಾಗಿತ್ತು. ನಂತರದ ದಿನಗಳಲ್ಲಿ ಉತ್ತಮ ಮಳೆ ಬಂತಾದರೂ ಬೆಳೆ ಕೈಸೇರುವ ಹೊತ್ತಿನಲ್ಲಿ ಮಳೆ ಬಾರದೆ ರೈತರಲ್ಲಿ ಭೀತಿ ಮೂಡಿಸಿದೆ. ಮಳೆ ಇಲ್ಲದೆ ಇದೇ ರೀತಿ ವಾತಾವರಣ ಮುಂದುವರಿದಲ್ಲಿ ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ. ಬೆಳೆ ವಿಮೆ ಪಾವತಿಗೆ ಬುಧವಾರ ಕೊನೇ ದಿನವಾಗಿದ್ದು, ಅವಧಿಯನ್ನು ಇನ್ನೂ ಕೆಲವು ದಿನ ವಿಸ್ತರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಎರಡು ತಿಂಗಳಿನಿಂದ ವಿಮಾ ಪಾವತಿಸಲು ಸಮಯ ನಿಗದಿ ಮಾಡಲಾಗಿತ್ತ್ತು. ಗ್ರಾಮ ಒನ್, ಸಿಎಸ್‌ಸಿ ಕೇಂದ್ರ, ಬ್ಯಾಂಕ್‌ಗಳಲ್ಲಿ ವಿಮೆ ತುಂಬಲು ಅವಕಾಶ ನೀಡಲಾಗಿತ್ತು. ಸೂರ್ಯಕಾಂತಿ, ಶೇಂಗಾ, ಉದ್ದು, ಹೆಸರು, ಹತ್ತಿ, ಈರುಳ್ಳಿ, ಆಲೂಗಡ್ಡೆ ಬೆಳೆಗಳಿಗೆ ವಿಮೆ ಪಾವತಿ ಮುಕ್ತಾಯವಾಗಿದ್ದು, ಬಿತ್ತನೆಯ ಕಡೆಯ ಬೆಳೆಯಾದ ರಾಗಿ ಬೆಳೆಗೆ ಬುಧವಾರ ಕಡೆಯ ದಿನವಾಗಿದ್ದರಿಂದ ರೈತರು ಕಂಪ್ಯೂಟರ್ ಸೆಂಟರ್‌ಗಳಲ್ಲಿ ಮುಗಿಬಿದ್ದಿದ್ದರು. ಬಿತ್ತನೆಯಲ್ಲಿ ಹಿನ್ನಡೆಯಾಗಿರುವ ರೈತರು ವಿಮೆ ಪಾವತಿಸಲು ಯಾವುದೇ ಅವಕಾಶವಿಲ್ಲದಂತಾಗಿದೆ.
ಎಲ್ಲ ಬೆಳೆಗಳಿಗೂ ವಿಮೆ ಪಾವತಿಸಲು ಬುಧವಾರ ಕಡೆಯ ದಿನ. ಮಳೆಯಿಲ್ಲದೆ ಬೆಳೆ ನಾಶವಾದಲ್ಲಿ ಪರಿಹಾರ ಘೋಷಣೆ ಮಾಡಿದಲ್ಲಿ, ಆಗ ಎಲ್ಲರಿಗೂ ಪರಿಹಾರ ಹಣ ಪಡೆಯಲು ಅವಕಾಶವಿದೆ ಎಂದು ಬೀರೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸೋಮನಿಂಗಪ್ಪ ಮಾಹಿತಿ ನೀಡಿದರು.