ನ್ಯೂಸ್

ತಜ್ಞರ ಸಮಿತಿ ಸಲ್ಲಿಕೆ: ಸಿಇಟಿ ಪಠ್ಯಕ್ರಮ ಹೊರತಾದ ಎಷ್ಟು ಪ್ರಶ್ನೆಗಳಿವೆ? ಮರು ಪರೀಕ್ಷೆ, ಕೃಪಾಂಕ ಎಷ್ಟು ಸಂಪೂರ್ಣ ಮಾಹಿತಿ ಇಲ್ಲಿದೆ. ನಿಜವಾಯ್ತು ವಿಜಯವಾಣಿ ವರದಿ

ಬೆಂಗಳೂರು ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ್ದ ಸಿಇಟಿ-2024ರಲ್ಲಿ ಪಠ್ಯಕ್ರಮ ಹೊರತಾದ 50 ಪ್ರಶ್ನೆಗಳಿವೆ.ಈ ಪ್ರಶ್ನೆಗಳನ್ನು ಕೈಬಿಟ್ಟು ಮೌಲ್ಯಮಾಪನ ಮಾಡಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮರು ಪರೀಕ್ಷೆ ಮಾಡಬಾರದು ಮತ್ತು ತಪ್ಪಾದ 2 ಪ್ರಶ್ನೆಗಳಿಗೆ ಕೃಪಾಂಕ ನೀಡಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯು ನೇಮಿಸಿದ್ದ ತಜ್ಞರ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏ.18 ಮತ್ತು 19ರಂದು ನಡೆಸಿದ್ದ ಸಿಇಟಿ ಪಠ್ಯಕ್ರಮ ಹೊರತಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಇಲಾಖೆಯು ನೇಮಿಸಿದ್ದ 4 ಪ್ರತ್ಯೇಕ ಸಮಿತಿಯು ಸರ್ಕಾರಕ್ಕೆ ವರದಿ ನೀಡಿವೆ.

ಸಿಇಟಿಯನ್ನು 3.49 ಲಕ್ಷ ವಿದ್ಯಾರ್ಥಿಗಳು ಬರೆದಿದ್ದಾರೆ. ಆ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಣಸಂಸ್ಥೆಗಳು ಹಲವು ಪ್ರಶ್ನೆಗಳು ಪಠ್ಯಕ್ರಮ ಹೊರತಾಗಿವೆ ಎಂಬ ಆರೋಪ ಮಾಡಿದ್ದವು. ಕೃಪಾಂಕ ನೀಡಬೇಕು ಮತ್ತು ಪಠ್ಯಕ್ರಮ ಹೊರತಾದ ಪ್ರಶ್ನೆಗಳನ್ನು ಲಿತಾಂಶದ ವೇಳೆ ಕೈಬಿಡಬೇಕು ಹಾಗೂ ಮರು ಪರೀಕ್ಷೆ ನಡೆಸಬೇಕೆಂಬ ಬೇಡಿಕೆಯನ್ನಿಟ್ಟದ್ದವು.

ಈ ಎಲ್ಲ ಆಕ್ಷೇಪಣೆಗಳನ್ನು ಪರಿಗಣಿಸಲಾಗಿದೆ. ಒಟ್ಟು 4 ವಿಷಯಗಳ ಪರೀಕ್ಷೆಗಳನ್ನು ತಲಾ 60 ಅಂಕಗಳಿಗೆ ನಡೆಸಲಾಗಿತ್ತು. ಅದರಂತೆ 2022-23 ಮತ್ತು 2023-24ರಲ್ಲಿ ಕೈಬಿಡಲಾದ ಪಠ್ಯಕ್ರಮಗಳಿಂದ ಜೀವಶಾಸದಲ್ಲಿ 11, ಭೌತಶಾಸ-9, ಗಣಿತ ಮತ್ತು ರಸಾಯನಶಾಸದಲ್ಲಿ ತಲಾ 15 ಸೇರಿ ಒಟ್ಟು 50 ಪ್ರಶ್ನೆಗಳು ಪಠ್ಯಕ್ರಮ ಹೊರತಾದ ಪ್ರಶ್ನೆಗಳಿವೆ. ಆದರೆ, ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯಕ್ರಮದಲ್ಲಿ ಕಲಿತ ಹಲವು ಪ್ರಶ್ನೆಗಳಿವೆ. ಇವುಗಳನ್ನು ಪ್ರಶ್ನೆಪತ್ರಿಕೆಗಳಿಂದ ತೆಗೆದು ಹಾಕುವ (ಡೆಲಿಟ್) ಅವಶ್ಯಕತೆಇಲ್ಲ ಎಂದು ತಿಳಿಸಿದೆ.

ಸಮಿತಿ ನೀಡಿರುವ ಶಿಾರಸುಗಳು:

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಕೆಇಎ ಸಿಇಟಿಯ ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ. 2023-24ನೇ ಸಾಲಿನ ಪಠ್ಯಕ್ರಮದಿಂದ ಹೊರಗಿರುವ ಪ್ರಶ್ನೆಗಳನ್ನು ಮೌಲ್ಯಮಾಪನದಿಂದ ತೆಗೆದು ಹಾಕಬೇಕು. ಉಳಿದ ಪ್ರಶ್ನೆಗಳನ್ನು ಮಾತ್ರ ಮೌಲ್ಯಮಾಪನ ಮಾಡಬೇಕು.

ಜೀವಶಾಸದಲ್ಲಿ 11, ಭೌತಶಾಸ-9, ಗಣಿತ-15 ಮತ್ತು ರಸಾಯನಶಾಸದಲ್ಲಿ 15 ಸೇರಿ ಒಟ್ಟು 50 ಪ್ರಶ್ನೆಗಳನ್ನು ಮೌಲ್ಯಮಾಪನದಿಂದ ತೆಗೆದುಹಾಕಬೇಕು. ಇದರೊಂದಿಗೆ ತೆಗೆದು ಹಾಕಲಾದ ಪ್ರಶ್ನೆಗಳನ್ನು ಮತ್ತು ಕೀ ಉತ್ತರಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು.

ಸಿಇಟಿ ಉಳಿದ ಪ್ರಶ್ನೆಗಳಿಗೆ ಮಾತ್ರ ಮೌಲ್ಯಮಾಪನ ಮಾಡಬೇಕು ಹಾಗೂ ಪ್ರಶ್ನೆಪತ್ರಿಕೆಯಲ್ಲಿ ತಪ್ಪಾದ 2 ಪ್ರಶ್ನೆಗಳಿಗೆ ಕೃಪಾಂಕ ನೀಡಬೇಕು.

ಮೇ ಮತ್ತು ಜೂನ್ ತಿಂಗಳಿನಲ್ಲಿ ಜೆಇಇ ಅಡ್ವಾನ್ಸ್‌ಡ್, ನೀಟ್, ನೆಸ್ಟ್, ಸಿಯುಇಟಿ ಮತ್ತು ದ್ವಿತೀಯ ಪಿಯುಸಿ 2 ಮತ್ತು 3ನೇ ಪರೀಕ್ಷೆ ಸೇರಿ ಹಲವಾರು ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಎದುರಿಸಬೇಕಿದೆ.

ಈ ಹಂತದಲ್ಲಿ ಮರು ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಅನಗತ್ಯ ತೊಂದರೆ ಹಾಗೂ ಹೊರೆಯಾಗಲಿದೆ. ವಿದ್ಯಾರ್ಥಿಗಳಿಗೆ ಅನಗತ್ಯ ಗಾಬರಿ ಮತ್ತು ಕಿರುಕುಳವನ್ನು ಉಂಟುಮಾಡುತ್ತದೆ. ವಿದ್ಯಾರ್ಥಿಗಳ ತಪ್ಪಿಲ್ಲದೆ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದ ಮರು ಪರೀಕ್ಷೆಯನ್ನು ನಡೆಸುವುದರಿಂದ ವೃತ್ತಿಪರ ಕೋರ್ಸ್‌ಗಳ ಶೈಕ್ಷಣಿಕ ವೇಳಾಪಟ್ಟಿ ಕೂಡ ವಿಳಂಬವಾಗಲಿದೆ ಎಂದು ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿದೆ.

ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸುವುದಕ್ಕಾಗಿ ಸಿಇಟಿ ಪ್ರಶ್ನೆಪತ್ರಿಕೆಗಳನ್ನು ಹೊಂದಿಸಲು ವಿವರವಾದ ಕಾರ್ಯವಿಧಾನವನ್ನು ಅನುಸರಿಸಬೇಕು ಎಂಬ ನಿರ್ದೇಶನ ನೀಡಿದೆ. ಸಿಇಟಿ ಲಿತಾಂಶವನ್ನು ಮೇ ಅಂತ್ಯದೊಳಗೆ ಪ್ರಕಟಿಸುವಂತೆ ಸೂಚಿಸಿದೆ.